ಮೈಸೂರು (Mysuru): ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೂನ್ 20 ಹಾಗೂ 21ರಂದು ಮೈಸೂರಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಭದ್ರತೆಗೆ ತೆಗೆದುಕೊಳ್ಳಲಾದ ಕ್ರಮಗಳನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಭಾನುವಾರ ಪರಿಶೀಲಿಸಿದರು.
ಯೋಗ ದಿನ ಕಾರ್ಯಕ್ರಮ ನಡೆಯಲಿರುವ ಅರಮನೆ ಆವರಣಕ್ಕೆ ತೆರಳಿ ಸಿದ್ಧತೆ ಪರಿಶೀಲಿಸಿದರಲ್ಲದೆ, ಅಂತಿಮ ಹಂತದ ಯೋಗಾಭ್ಯಾಸವನ್ನು ವೀಕ್ಷಿಸಿದರು. ಜೊತೆಗೆ ವೇದಿಕೆ, ಯೋಗ ಪಟುಗಳಿಗೆ ಮಾಡಿರುವ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮದ ಎಲ್ಲಾ ಸಿದ್ಧತೆಗಳು ಅಂತಿಮ ಹಂತದಲ್ಲಿದೆ. ಶಾಂತಿ-ಸುವ್ಯವಸ್ಥೆ ಕಾಪಾಡಲು ಮೈಸೂರು ಜಿಲ್ಲೆ ಪೊಲೀಸರು ಮಾತ್ರವಲ್ಲಾ ಹೊರ ಜಿಲ್ಲೆಯಿಂದಲೂ ಹೆಚ್ಚುವರಿ ಪೊಲೀಸರನ್ನ ಕರೆಸಲಾಗಿದೆ. ಪೊಲೀಸರ ಭದ್ರತೆ ನಿರ್ದಿಷ್ಟ ಸಂಖ್ಯೆಯನ್ನು ಮಧ್ಯಾಹ್ನದ ನಂತರ ತಿಳಿಸುತ್ತೇನೆ. ಭದ್ರತೆಗೆ ಎಲ್ಲಾ ಸಿದ್ಧತೆಗಳು ಅಂತಿಮವಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಮಾತನಾಡಿ, ಜೂನ್ 5 ಮತ್ತು 11ರಂದು ಯೋಗ ತಾಲೀಮು ನಡೆಸಲಾಗಿದ್ದು, ಇಂದು ಅಂತಿಮ ಹಂತದ ತಾಲೀಮು ನಡೆಸಲಾಗಿದೆ. 51 ವಿವಿಧ ವರ್ಗದ ಜನತೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಯೋಗ ಮಾಡಲಿದ್ದಾರೆ. ಪ್ರಧಾನಿ ಪಾಲ್ಗೊಳ್ಳುವ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಿದ್ಧತೆ ಪೂರ್ಣಗೊಂಡಿದೆ. ನಾಲ್ಕು ಕಡೆ ಪ್ರವೇಶ ಕಲ್ಪಿಸಲಾಗಿದೆ. ಬೆಳಿಗ್ಗೆ 5.30ಕ್ಕೆ ಪ್ರವೇಶದ್ವಾರ ಬಂದ್ ಆಗಲಿದೆ. ಯೋಗ ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಅರಮನೆ ಮುಂಭಾಗದ ಯೋಗ ವೇದಿಕೆಯಲ್ಲಿ ಇಬ್ಬರು ರಾಜವಂಶಸ್ಥರಿಗೆ ಅವಕಾಶ ನೀಡಲಾಗಿದೆ. ಪ್ರಧಾನಿ ಜೊತೆ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಮತ್ತು ಯದುವೀರ್ ಅವರಿಗೆ ವೇದಿಕೆ ಹಂಚಿಕೊಳ್ಳಲು ಆಹ್ವಾನ ನೀಡಲಾಗಿದೆ. ಮೊದಲು ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಎಂಬ ಚೆರ್ಚೆ ಇತ್ತು ಈಗ ಅಂತಿಮವಾಗಿ ಇಬ್ಬರಿಗೂ ವೇದಿಕೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ವೇದಿಕೆ ಕಾರ್ಯಕ್ರಮದ ನಂತರ ಯದುವಂಶದವರ ಜೊತೆ ಅರಮನೆಯಲ್ಲೇ ಮೋದಿ ಉಪಹಾರ ಸೇವಿಸಲಿದ್ದಾರೆ.
ಶಾಸಕ ಎಲ್. ನಾಗೇಂದ್ರ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ಎಸ್ಪಿ ಚೇತನ್ ಇದ್ದರು.