ಬೆಂಗಳೂರು: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಮಹತ್ವಕಾಂಕ್ಷಿ ಪಿಎಂ-ವಿಶ್ವಕರ್ಮ ಯೋಜನೆಯಲ್ಲಿ ಗಾಣಿಗ ಸಮುದಾಯವನ್ನು ಸೇರಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಅಖಿಲ ಕರ್ನಾಟಕ ಗಾಣಿಗ ಮಹಾಸಭಾ(ರಿ) ಅಧ್ಯಕ್ಷ ಎಂ. ಚಂದ್ರಶೇಖರ್ ಅವರು ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅವರು ಇ-ಮೇಲ್ ಮೂಲಕ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ರವಾನಿಸಿರುವ ಲಿಖಿತ ಮನವಿಗೆ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಕೂಡ ಬಂದಿದೆ.
ಕೇಂದ್ರ ಸರ್ಕಾರ ಪಿಎಂ-ವಿಶ್ವಕರ್ಮ ಯೋಜನೆಯಲ್ಲಿ ಗಾಣಿಗ/ಸಾಹು/ತೇಲಿ/ಮೋದಿ/ಗಾಂಡ್ಲಾ/ವಾಣಿಯರ್/ಚೆಟ್ಟಿಯರ್ ಸಮುದಾಯವನ್ನೂ ಸೇರಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಗಾಣದಿಂದ ಶುದ್ಧ ಎಣ್ಣೆ ತೆಗೆಯುವ ಗಾಣಿಗ ಸಮುದಾಯವನ್ನು ಈ ಯೋಜನೆಯಲ್ಲಿ ಸೇರಿಸಬೇಕು. ದೇಶದಲ್ಲಿನ ಇಂದಿನ ಅನೇಕ ಅನಾರೋಗ್ಯ ಸಮಸ್ಯೆಗಳಿಗೆ ಕಲಬೆರಕೆ-ನಕಲಿ ಅಡುಗೆ ಎಣ್ಣೆಗಳೇ ಕಾರಣ. ಹೀಗಿರುವಾಗ ಸ್ವಸ್ಥ ಸಮಾಜ, ಸದೃಢ ದೇಶ ನಿರ್ಮಾಣದ ನಿಟ್ಟಿನಲ್ಲಿ ಗಾಣಿಗ ಸಮುದಾಯವನ್ನು ಈ ಯೋಜನೆ ಮೂಲಕ ಪ್ರೋತ್ಸಾಹಿಸುವ ಅಗತ್ಯವಿದೆ ಎನ್ನುವ ಮೂಲಕ ಅವರು ಈ ಕೋರಿಕೆಯನ್ನು ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರದ ಪ್ರತಿಕ್ರಿಯೆ :- ಪಿಎಂ-ವಿಶ್ವಕರ್ಮ ಯೋಜನೆಯು ಈಗಾಗಲೇ 18 ಉದ್ಯಮ/ಉದ್ಯೋಗವನ್ನು ಒಳಗೊಂಡಿದೆ. ಅಲ್ಲದೆ ಈ ಪಟ್ಟಿ ಪ್ರಧಾನಿ ಅಧ್ಯಕ್ಷತೆಯ ನ್ಯಾಷನಲ್ ಸ್ಟೀರಿಂಗ್ ಕಮಿಟಿಯ ಪರಿಷ್ಕರಣೆಗೆ ಒಳಪಡುವಂತಾಗಿದ್ದು, ತೈಲ ತೆಗೆಯುವ ಗಾಣಿಕ ಸಮುದಾಯವನ್ನು ಮುಂದಿನ ಪರಿಷ್ಕರಣೆ ವೇಳೆ ಪರಿಗಣಿಸಬಹುದಾಗಿದೆ ಎಂದು ಕೇಂದ್ರ ಸರ್ಕಾರವು ಚಂದ್ರಶೇಖರ ಅವರ ಮನವಿಗೆ ಪ್ರತಿಕ್ರಿಯೆ ನೀಡಿದೆ.
ಚಂದ್ರಶೇಖರ್ ಅವರ ಮನವಿಗೆ ಪೂರಕವಾಗಿ ಗಾಣಿಗ ಸಮುದಾಯದ ಇತರ ಸಂಘಟನೆಗಳು, ಸಂಘದವರು ಹಾಗೂ ಜನಪ್ರತಿನಿಧಿಗಳು ಕೂಡ ಈ ನಿಟ್ಟಿನಲ್ಲಿ ದನಿಗೂಡಿಸಿದರೆ ಪಿಎಂ-ವಿಶ್ವಕರ್ಮ ಯೋಜನೆಯಲ್ಲಿ ಗಾಣಿಗ ಸಮುದಾಯ ಸೇರ್ಪಡೆ ಆಗುವ ಸಾಧ್ಯತೆ ಇದೆ.
ಏನಿದು ಪಿಎಂ-ವಿಶ್ವಕರ್ಮ ಯೋಜನೆ ? :-
ಪಿಎಂ-ವಿಶ್ವಕರ್ಮ ಕೇಂದ್ರ ಸರ್ಕಾರದ ಹೊಸ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, 77ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇದಕ್ಕೆ ಚಾಲನೆ ನೀಡಿದರು. ಈ ಯೋಜನೆಗೆ 2023-24 ರಿಂದ 2027- 28ರ ನಡುವಿನ ಐದು ವರ್ಷಗಳ ಅವಧಿಗೆ 13,000 ಕೋಟಿ ರೂ ಅನುದಾನ ಘೋಷಣೆ ಮಾಡಲಾಗಿದೆ.
ಈ ಯೋಜನೆಯನ್ನು ಮುಖ್ಯವಾಗಿ ಸಾಂಪ್ರದಾಯಿಕ ಕರಕುಶಲಕರ್ಮಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಆರಂಭ ಮಾಡಲಾಗಿದೆ. ಕುಶಲಕರ್ಮಿಗಳು ಮತ್ತು ಕಲೆಗಾರರು ತಮ್ಮ ಕೈ ಮತ್ತು ಉಪಕರಣಗಳೊಂದಿಗೆ ಕೆಲಸ ಮಾಡುವ ಗುರು-ಶಿಷ್ಯ ಪರಂಪರೆ ಅಥವಾ ಕುಟುಂಬ ಆಧಾರಿತ ಸಾಂಪ್ರದಾಯಿಕ ಕೌಶಲಗಳನ್ನ ಬಲಪಡಿಸುವ ಮತ್ತು ಪೋಷಿಸುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದು ಸರ್ಕಾರ ಉದ್ಘಾಟನೆ ವೇಳೆ ತಿಳಿಸಿದೆ.
ಸಾಂಪ್ರದಾಯಿಕ ಕರಕುಶಲಕರ್ಮಿಗಳಿಗೆ, ವಿಶೇಷವಾಗಿ ಒಬಿಸಿ ಸಮುದಾಯಕ್ಕೆ ಸೇರಿದವರಿಗೆ ಈ ಯೋಜನೆಯ ಪ್ರಯೋಜನ ಲಭ್ಯವಾಗುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಂದು ತಿಳಿಸಿದರು. ನೇಕಾರರು, ಅಕ್ಕಸಾಲಿಗರು, ಕಮ್ಮಾರರು, ಲಾಂಡ್ರಿ ಕಾರ್ಮಿಕರು, ಕ್ಷೌರಿಕರು ಮತ್ತು ಅಂತಹ ಕುಟುಂಬಗಳನ್ನು ವಿಶ್ವಕರ್ಮ ಯೋಜನೆ ಮೂಲಕ ಸಬಲೀಲಕರಣ ಗೊಳಿಸಲಾಗುವುದು. ಇದು ಸುಮಾರು 13-15 ಸಾವಿರ ಕೋಟಿ ಹಂಚಿಕೆಯೊಂದಿಗೆ ಆರಂಭವಾಗುವ ಯೋಜನೆ ಎಂದು ಪ್ರಧಾನಿ ಹೇಳಿದ್ದರು.
ಆದರೆ ಪ್ರಧಾನ ಮೋದಿಯವರದ್ದೇ ಸಮುದಾಯ ಆಗಿರುವ ಗಾಣಿಗ ಸಮುದಾಯ ಈ ಯೋಜನೆಯೆಲ್ಲಿ ಇಲ್ಲದಿರುವುದು ಬೇಸರದ ಸಂಗತಿ. ಸಮಸ್ತ ಗಾಣಿಗರು ಈ ಸಲುವಾಗಿ ದನಿ ಎತ್ತಿದ್ದಲ್ಲಿ ಗಾಣಿಗ ಸಮುದಾಯ ಕೂಡ ಅರ್ಹವಾಗಿದೆಯೇ ಪಿಎಂ-ವಿಶ್ವಕರ್ಮ ಯೋಜನೆಗೆ ಒಳಪಡುವುದು ಕಷ್ಟವೇನಲ್ಲ.
ಪ್ರಯೋಜನಗಳು :-
“ಪಿಎಂ-ವಿಶ್ವಕರ್ಮ” ಯೋಜನೆಯಡಿ ಕುಶಲಕರ್ಮಿಗಳು ಮತ್ತು ಕಲೆಗಾರರಿಗೆ ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ಸಿಗುತ್ತದೆ. ಒಂದು ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ (ಮೊದಲ ಭಾಗ) ಮತ್ತು 2 ಲಕ್ಷ ರೂಪಾಯಿ (ಎರಡನೇ ಭಾಗ) ಶೇಕಡ 5 ಬಡ್ಡಿದರದಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಹೆಚ್ಚಿನ ಕಲೆ ಕಲಿಯಲೂ ಬೇಕಾದ ವಸ್ತುಗಳಿಗೆ ಪ್ರೋತ್ಸಾಹ ನಿಧಿ, ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ ಮತ್ತು ಮಾರ್ಕೆಟಿಂಗ್ ಬೆಂಬಲವನ್ನ ಈ ಯೋಜನೆ ಒದಗಿಸುತ್ತದೆ.
ಯಾರಿಗೆಲ್ಲ ಅನ್ವಯ ? :-
ಬಡಗಿ, ದೋಣಿ ತಯಾರಕ, ರಕ್ಷಾಕವಚ ತಯಾರಕ, ಕಮ್ಮಾರ, ಸುತ್ತಿಗೆ ಮತ್ತು ಇತರೆ ಸಾಮಾಗ್ರಿ ತಯಾರಕ, ಅಕ್ಕಸಾಲಿಗ, ಮೂರ್ತಿ ಮಾಡುವ, ಶಿಲ್ಪಿ, ಕಲ್ಲು ಹೊಡೆಯುವವರು, ಚಮ್ಮರ, ಗಾರೆ ಮೇಸ್ತ್ರಿ ಬುಟ್ಟಿ/ಚಾಪೆ/ಹಿಡಿಸೂಡಿ ತಯಾರಿಕರು, ಸೆಣಬು ನೇಕಾರರು, ಸಾಂಪ್ರದಾಯಿಕ ಗೊಂಬೆ ಮತ್ತು ಆಟಿಕೆ ತಯಾರಿಸುವವರು, ಮಡಿವಾಳ, ಟೈಲರ್, ಮೀನಿನ ಬಲೆ ತಯಾರಿಕರು ಸದ್ಯ ಈ ಯೋಜನೆಗೆ ಒಳಪಡುತ್ತಿದ್ದಾರೆ.