ಮನೆ ಕಾನೂನು ಸುಳ್ಳು ಕೌಟುಂಬಿಕ ದೌರ್ಜನ್ಯ ಪ್ರಕರಣಗಳಂತೆಯೇ ಪಿಎಂಎಲ್ಎ ಕೇಸ್‌ ರದ್ದತಿಗೆ ಮುಂದಾಗಬೇಕಾಗುತ್ತದೆ: ಸುಪ್ರೀಂ ಕೋರ್ಟ್

ಸುಳ್ಳು ಕೌಟುಂಬಿಕ ದೌರ್ಜನ್ಯ ಪ್ರಕರಣಗಳಂತೆಯೇ ಪಿಎಂಎಲ್ಎ ಕೇಸ್‌ ರದ್ದತಿಗೆ ಮುಂದಾಗಬೇಕಾಗುತ್ತದೆ: ಸುಪ್ರೀಂ ಕೋರ್ಟ್

0

ಐಪಿಸಿ ಸೆಕ್ಷನ್‌ 498 ಎ ಅಡಿ ದಾಖಲಿಸುವ ಸುಳ್ಳು ಕೌಟುಂಬಿಕ ದೌರ್ಜನ್ಯ ಪ್ರಕರಣಗಳಿಗೂ  ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿ ದಾಖಲಾಗುವ ಕ್ಷುಲ್ಲಕ ಹಣ ವರ್ಗಾವಣೆ ಪ್ರಕರಣಗಳಿಗೂ ಸಾಮ್ಯತೆ ಇದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

Join Our Whatsapp Group

ಹೀಗಾಗಿ ಐಪಿಸಿ ಸೆಕ್ಷನ್‌ 498 ಎ ಅಡಿ ದಾಖಲಾಗುವ ಸುಳ್ಳು ಪ್ರಕರಣಗಳನ್ನು ರದ್ದುಗೊಳಿಸುವಂತೆಯೇ ಪಿಎಂಎಲ್‌ಎ ಅಡಿ ದಾಖಲಾಗುವ ಕ್ಷುಲ್ಲಕ ಪ್ರಕರಣಗಳನ್ನು ರದ್ದುಗೊಳಿಸಬೇಕು ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟೀನ್‌ ಜಾರ್ಜ್ ಮಸೀಹ್ ಅವರಿದ್ದ ಪೀಠ ಲಘು ಧಾಟಿಯಲ್ಲಿ ಹೇಳಿತು.

ಅಂತಹ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ಅಧಿಕಾರಿಗಳ ನಡೆ ಬಗೆಗಿನ ದಾಖಲೆಗಳನ್ನೂ ತಾನು ಅವಲೋಕಿಸಬೇಕಾಗುತ್ತದೆ ಎಂದು ಪೀಠ ಹೇಳಿತು.

“ಲಘುವಾಗಿ ಹೇಳಬೇಕೆಂದರೆ ಕ್ರೌರ್ಯದ ಪ್ರಕರಣಗಳನ್ನು ನಾವು ಹೇಗೆ ನಿರ್ಣಯಿಸುತ್ತೇವೆ ಎಂದು ನಿಮಗೆ ತಿಳಿದಿದೆಯೇ? ಈ ಸೆಕ್ಷನ್‌ಗಳು ದುರುಪಯೋಗವಾಗುವುದನ್ನು ನಾವು ಗಮನಿಸಿದ್ದು ಅಂತಹ ಪ್ರಕರಣಗಳನ್ನು ರದ್ದುಗೊಳಿಸುತ್ತಿರುತ್ತೇವೆ. ಪಿಎಂಎಲ್‌ಎ ಕಾಯಿದೆ ಕೂಡ ಆ ರೀತಿಯೇ ಜಾರಿಯಾಗುತ್ತಿದ್ದರೆ ಆಗಲೂ ನ್ಯಾಯಾಲಯ ಹೀಗೆ ನಡೆದುಕೊಳ್ಳಬೇಕಾಗುತ್ತದೆ. ನ್ಯಾಯಾಧೀಶರು ಕೂಡ ಮನುಷ್ಯರಾಗಿದ್ದು ಪಿಎಂಎಲ್‌ಎ ಹೇಗೆ ಬಳಕೆಯಾಗುತ್ತದೆ ಎಂಬ ಬಗ್ಗೆ ಮಾತನಾಡಿಕೊಳ್ಳುತ್ತಾರೆ” ಎಂದು ನ್ಯಾ. ಓಕಾ ತಿಳಿಸಿದರು.

ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ  ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿರುವ ವಂಚನೆ, ಫೋರ್ಜರಿ, ಲಂಚ ಮತ್ತಿತರ ಪ್ರಕರಣ ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣ ರದ್ದುಗೊಳಿಸಲು ಛತ್ತೀಸ್‌ಗಢ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಟುಟೇಜಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ  ಸರ್ವೋಚ್ಚ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ವಿಚಾರಣೆ ವೇಳೆ ಇ ಡಿ ಪರವಾಗಿ  ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ ಜಿ) ಎಸ್ ವಿ ರಾಜು , ಆರೋಪಿ ಪರವಾಗಿ ಹಿರಿಯ ವಕೀಲ ಡಾ.ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.

ಆರೋಪಿಗೆ ಸಮನ್ಸ್‌ ನೀಡಿದ ರೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪೀಠ  ಎಸಿಬಿ ಕಚೇರಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ ಎಂದು ತಿಳಿದೂ ಇ ಡಿ ಸಮನ್ಸ್‌ ನೀಡಿದ್ದು ಏಕೆ ಎಂದು ಕಿಡಿಕಾರಿತು. ಇ ಡಿ ಸೂಕ್ತ ಅಫಿಡವಿಟ್‌ ಸಲ್ಲಿಸಬೇಕು ಇಲ್ಲದಿದ್ದರೆ ತಾನು ಸಂಸ್ಥೆಯ ಅಧಿಕಾರಿಗಳ ಬಗ್ಗೆ ಪ್ರತಿಕೂಲ ಅವಲೋಕನ ಮಾಡಬೇಕಾಗುತ್ತದೆ ಎಂದು ಅದು ಎಚ್ಚರಿಕೆ ನೀಡಿತು. ನವೆಂಬರ್‌ 5 ರಂದು ಪ್ರಕರಣದ ಮುಂದಿನ ವಿಚಾರಣೆ ನಿಗದಿಯಾಗಿದೆ.

ಗಮನಾರ್ಹ ಅಂಶವೆಂದರೆ, ಛತ್ತೀಸ್‌ಗಢ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಟುಟೇಜಾ ಹಾಗೂ ಇತರರ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಕಳೆದ ಏಪ್ರಿಲ್‌ನಲ್ಲಿ ರದ್ದುಗೊಳಿಸಿತ್ತು .

ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ  ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಪ್ರಕರಣದಲ್ಲಿ ಗಂಭೀರ ಅಪರಾಧದ ಭಾಗವಾದ ಆಂಶಿಕ ಅಪರಾಧ (ಪ್ರೆಡಿಕೇಟ್‌ ಅಫೆನ್ಸ್‌) ಘಟಿಸಿಲ್ಲ. ಆದ್ದರಿಂದ ಪಿಎಂಎಲ್‌ಎ ಅಡಿಯಲ್ಲಿ ಇ ಡಿ ಅಕ್ರಮ ಹಣ ವರ್ಗಾವಣೆ ಪ್ರಕರಣ  ದಾಖಲಿಸುವಂತಿಲ್ಲ ಎಂದಿತ್ತು.