ತೋರಣಗಲ್ಲು(ಬಳ್ಳಾರಿ): ಜಿಂದಾಲ್ ಕಾರ್ಖಾನೆಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ವೊಂದು ಹಳ್ಳದಲ್ಲಿ ಮುಗುಚಿ ಬಿದ್ದಿದೆ. ಟ್ರ್ಯಾಕ್ಟರ್ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ ಇದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ.
ತೋರಣಗಲ್ಲು ಹೋಬಳಿಯ ವಿಠಲಾಪುರ, ಮೆಟ್ರಿಕಿ, ರಾಜಾಪುರ, ಅಂತಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ಭಾರಿ ಮಳೆಯಾಗಿದೆ. ಹೀಗಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.
ಜಿಂದಾಲ್ ’10 ಎಂಟಿ’ ಗೇಟ್ ಬಳಿಯ ಹಳ್ಳದ ಪಕ್ಕದಲ್ಲಿ ವಾಸವಿರುವ ಕಾರ್ಮಿಕರು ಎಂದಿನಂತೆ ಟ್ರ್ಯಾಕ್ಟರ್ ನಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕೆಲ ಕಾರ್ಮಿಕರು ಈಜಿ ಹೊರ ಬಂದಿದ್ದಾರೆ. ಇನ್ನೂ ಕೆಲ ಕಾರ್ಮಿಕರು ಸಿಲುಕಿರುವ ಶಂಕೆ ಇದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಪೊಲೀಸ್ ಇಲಾಖೆ ಹಾಗೂ ಮುಳುಗು ತಜ್ಞರು ಆಗಮಿಸಿ ಮುಗುಚಿ ಬಿದ್ದ ಟ್ರಾಕ್ಟರ್ ಶೋಧನಾ ಕಾರ್ಯ ನಡೆಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ತೋರಣಗಲ್ ಡಿಎಸ್ಪಿ ಪ್ರಸಾದ್ ಗೋಖಲೆ, ಕಾರ್ಮಿಕರೆಲ್ಲರೂ ಈಜಿ ಹೊರಬಂದಿದ್ದಾರೆ. ಯಾರಾದರೂ ಟ್ರ್ಯಾಕ್ಟರ್ ಅಡಿಯಲ್ಲಿ ಸಿಲುಕಿರಬಹುದಾದ ಸಾಧ್ಯತೆ ಇರುವುದರಿಂದ ಹುಡುಕಾಟ ನಡೆಸಿದ್ದೇವೆ ಎಂದರು.