ಬೆಳಗಾವಿ: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ, ಪರಿಶಿಷ್ಟ ಸಮಾಜದ ಮುಖಂಡ ಪೃಥ್ವಿಸಿಂಗ್ ಅವರ ಮೇಲಿನ ಹಲ್ಲೆ ವಿಚಾರದಲ್ಲಿ ಪೊಲೀಸರ ನಡೆ ಖಂಡನಾರ್ಹ. ಅವರಿಗೆ ಎಚ್ಚರಿಕೆ ಕೊಡುತ್ತೇನೆ; ತಕ್ಷಣ ಎಫ್ ಐಆರ್ ಮಾಡಿ ತನಿಖೆ ನಡೆಸಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಆಗ್ರಹಿಸಿದರು.
ನಗರದ ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೃಥ್ವಿಸಿಂಗ್ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಪೊಲೀಸರು ಈ ಪ್ರಕರಣದ ಸರಿಯಾದ ಕ್ರಮ ವಹಿಸದೇ ಇದ್ದರೆ ನ್ಯಾಯಾಲಯದ ಮೂಲಕ ಸಿಬಿಐ ತನಿಖೆ ಕೋರುತ್ತೇವೆ ಎಂದರು.
ಒಂದು ವೇಳೆ ದೂರು ಕೊಡಿದ್ದರೂ ಸ್ವಯಂಪ್ರೇರಿತ ದೂರು ದಾಖಲಸಿಕೊಂಡು ತನಿಖೆ ಮಾಡಬಹುದು. ಆರೋಪ ಸುಳ್ಳಿದ್ದರೆ ಬಿ– ರಿಪೋರ್ಟ್ ಹಾಕಬಹುದಿತ್ತು. ಆದರೆ, ಹಾಗೆ ಮಾಡಿಲ್ಲ. ಸ್ಥಳೀಯ ಪೊಲೀಸರ ಮೇಲೆ ಎಡಿಜಿಪಿ ರ್‍ಯಾಂಕ್ ಅಧಿಕಾರಿಯ ಮೂಲಕ ಒತ್ತಡ ಹೇರಲಾಗಿದೆ ಎಂದು ಆರೋಪಿಸಿದರು.
ಪೃಥ್ವಿಸಿಂಗ್ ವಿಚಾರದಲ್ಲಿ ನಾನು ಯಾರ ಮೇಲೂ ಈಗ ಆರೋಪ ಮಾಡುವುದಿಲ್ಲ. ತನಿಖೆ ನಡೆದ ಬಳಿಕ ಮಾತನಾಡುತ್ತೇನೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಏನೇನೋ ಹೇಳುವುದಿಲ್ಲ. ರಾಜಕಾರಣ ಬೇರೆ, ವೈಯಕ್ತಿಕ ಜಗಳ ಬೇರೆ. ಸುಳ್ಳು ಹೇಳಬೇಡವೆಂದು ಪೃಥ್ವಿಸಿಂಗ್ ಅವರಿಗೂ ಹೇಳಿದ್ದೇನೆ ಎಂದರು.
ಕೊತ್ವಾಲ್ ರಾಮಚಂದ್ರನ ಶಿಷ್ಯರು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೇಗೆ ಸಾಧ್ಯ? ಎಂದೂ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪೃಥ್ವಿ ನನ್ನ ಶಿಷ್ಯನೇ ಇರಬಹುದು. ಆದರೆ, ಅವನ ಮೂಲಕ ಚಿಲ್ಲರೆ ರಾಜಕಾರಣ ಮಾಡುವ ವ್ಯಕ್ತಿ ನಾನಲ್ಲ. ಕಳೆದ 20 ವರ್ಷಗಳ ರಾಜಕಾರಣದಲ್ಲಿ ನಾನು ಹೇಗೆ ಬೆಳೆದಿದ್ದೇನೆ ‘ಇವರೆಲ್ಲ’ ಹೇಗೆ ಬೆಳೆದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಅವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ಹೆಸರು ಹೇಳದೇ ದೂರಿದರು.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಭೂ ಮಾಫಿಯಾ ಹೆಚ್ಚಾಗಿದೆ. ಹೆದರಿಸಿ ಬಡವರ ಜಮೀನು ಕಬ್ಜಾ ಮಾಡಿಕೊಳ್ಳುವುದು, ಉತಾರ ಕಿತ್ತುಕೊಳ್ಳುವುದು ಹೆಚ್ಚಾಗಿದೆ. ನ್ಯಾಯಾಲಯದ ಮೂಲಕ ತಮ್ಮ ಹೆಸರಿಗೆ ಜಮೀನು ಮಾಡಿಕೊಳ್ಳುವುದು ನಡೆದಿದೆ. ಪಾರಿಶ್ವಾಡ ಗ್ರಾಮದಲ್ಲಂತೂ ಕೆಲ ಹೆಂಗಸರೇ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದೂ ರಮೇಶ ಜಾರಕಿಹೊಳಿ ಆರೋಪಿಸಿದರು.