ಮನೆ ಸುದ್ದಿ ಜಾಲ ನಟ ಪುನೀತ್ ರಾಜ್‌ ಕುಮಾರ್ ಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ

ನಟ ಪುನೀತ್ ರಾಜ್‌ ಕುಮಾರ್ ಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ

0

ಮೈಸೂರು:  ಕರ್ನಾಟಕ ರತ್ನ ದಿ.ಪುನೀತ್ ರಾಜ್‌ ಕುಮಾರ್, ಜಾನಪದ ಗಾಯಕ ಮಳವಳ್ಳಿ ಮಹಾದೇವಸ್ವಾಮಿ ಹಾಗೂ ಹಿರಿಯ ವಿಜ್ಞಾನಿ ಹಾಗೂ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ವಿಶ್ರಾಂತ ಮಹಾ ನಿರ್ದೇಶಕ ಡಾ.ವಾಸುದೇವ್ ಕಲ್ಕುಂಟೆ ಅತ್ರೆ ಅವರಿಗೆ  ಮೈಸೂರು ವಿಶ್ವವಿದ್ಯಾನಿಲಯದ 102ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಮಂಗಳವಾರ ಕ್ರಾಫರ್ಡ್ ಹಾಲ್ ನಲ್ಲಿ ನಡೆದ ಘಟಿಕೋತ್ಸವ ಸಮಾರಂಭ ಹಾಗೂ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮೂವರು ಸಾಧಕರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಮೊದಲಿಗೆ ಹಿರಿಯ ವಿಜ್ಞಾನಿ ಹಾಗೂ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ವಿಶ್ರಾಂತ ಮಹಾ ನಿರ್ದೇಶಕ ಡಾ.ವಾಸುದೇವ್ ಕಲ್ಕುಂಟೆ ಅತ್ರೆ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ನಂತರ ನಟ ಪುನೀತ್ ರಾಜ್‍ಕುಮಾರ್ ಅವರ ಹೆಸರು ಹೇಳುತ್ತಿದ್ದಂತೆ ಇಡೀ ಸಭಾಂಗಣದಲ್ಲಿ ಚಪ್ಪಾಳೆ ಸದ್ದು ಕೇಳಿ ಬಂತು. ಎಲ್ ಇಡಿ ಸ್ಕ್ರೀನ್ ನಲ್ಲಿ ಪುನೀತ್ ಬಾಲ್ಯ, ಅವರು ಅಭಿನಯಿಸಿದ ಹಲವು ಚಿತ್ರಗಳ ತುಣುಕು ಪ್ರದರ್ಶಿಸಲಾಯಿತು. ಪುನೀತ್ ರಾಜ್‍ ಕುಮಾರ್ ಪರವಾಗಿ ಪತ್ನಿ ಅಶ್ವಿನಿ ಅವರು ಗೌರವ ಡಾಕ್ಟರೇಟ್ ಸ್ವೀಕರಿಸಿದರು. ಈ ವೇಳೆ ಅವರು ಕೆಲಕಾಲ ಭಾವುಕಗೊಂಡರು. ಈ ಹಿಂದೆ ಪದ್ಮಭೂಷಣ ಡಾ.ರಾಜ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು 46 ವರ್ಷಗಳ ಹಿಂದೆ ಮೈಸೂರು ವಿವಿ ನೀಡಿತ್ತು ಎಂಬುದು ಸ್ಮರಣೀಯ.

ನಂತರ ಜಾನಪದ ಮಹಾನ್ ಕಲಾವಿದ ಜಾನಪದ ಗಾಯಕ ಮಳವಳ್ಳಿ ಮಹಾದೇವಸ್ವಾಮಿ ಅವರಿಗೂ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ರಾಷ್ಟ್ರೀಯ ಮೌಲ್ಯಾಂಕ ಮತ್ತು ಮಾನ್ಯತಾ ಪರಿಷತ್ತಿನ ನಿರ್ದೇಶಕ ಡಾ.ಎಸ್.ಸಿ.ಶರ್ಮ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ, ಎ.ಪಿ.ಜ್ಞಾನಪ್ರಕಾಶ್ ಸೇರಿದಂತೆ ಇತರರು ಹಾಜರಿದ್ದರು.