ಬೆಂಗಳೂರು(Bengaluru): ಕಾರಿನ ಮೇಲೆ ಮೊಟ್ಟೆ ಎಸೆತ ಘಟನೆ ಖಂಡಿಸಿ ಕಾಂಗ್ರೆಸ್ ಕರೆ ನೀಡಿದ್ದ ಮಡಿಕೇರಿ ಚಲೋ ಮುಂದೂಡಿರುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಡಿಕೇರಿ ಚಲೋ ಮುಂದೂಡಲು ನಿರ್ಧಾರ ಮಾಡಲಾಗಿದೆ. ಇದು ನನ್ನ ನಿರ್ಧಾರ ಅಲ್ಲ ಇದು ಪಕ್ಷದ ನಿರ್ಧಾರ. ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ಮಾಡಬಾರದು. ನಾವು ಕಾನೂನಿಗೆ ಗೌರವ ಕೊಡುತ್ತೇವೆ. ವಿಪಕ್ಷ ನಾಯಕನಾಗಿ ನಾನು ಹಾಗೆ ಮಾಡಲ್ಲ. ಬಿಜೆಪಿಯವರು ಬೇಕು ಅಂತಲೇ ಈ ರೀತಿ ಮಾಡಿದ್ದಾರೆ. ಇದು ರಾಜಕೀಯ ಷಡ್ಯಂತ್ರ ಎಂದು ಕಿಡಿಕಾರಿದರು.
ಮಡಿಕೇರಿ ಚಲೋ ಘೋಷಿಸಿದ ಮರು ದಿನವೇ ಜನಜಾಗೃತಿ ಸಮಾವೇಶ ಘೋಷಿಸಿದರು. ಇದು ಬಿಜೆಪಿಯವರ ನಾಟಕ. ಜಿಲ್ಲಾಧಿಕಾರಿ ಆದೇಶ ಎಂದರೆ ಸರ್ಕಾರದ ಆದೇಶ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ನಾವು ಸರ್ಕಾರದ ಆದೇಶವನ್ನು ಪರಿಪಾಲಿಸುತ್ತೇವೆ. ಕೊಡಗು ಜಿಲ್ಲೆಯಲ್ಲಿ ನಾನು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಮುಂದೂಡಲು ನಿರ್ಧರಿಸಿದ್ದೇವೆ ಎಂದರು.
ಆ.18ರಂದು ಅತಿವೃಷ್ಟಿಯಿಂದಾದ ಹಾನಿ ವೀಕ್ಷಿಸುವುದಕ್ಕಾಗಿ ಕೊಡಗು ಜಿಲ್ಲೆಗೆ ಹೋಗಿದ್ದೆ, ತಿತಿಮತಿಯಲ್ಲಿ 15-20 ಜನ ಕಪ್ಪು ಬಾವುಟ ಪ್ರದರ್ಶಿಸಿದರು ಆದರೆ ಪೊಲೀಸರು ಏನೂ ಮಾಡದೇ ಸುಮ್ಮನೆ ನಿಂತಿದ್ದರು. ಅವರು ಕಪ್ಪು ಬಾವುಟ ಕಾರಿನಲ್ಲಿ ಹಾಕಲು ಬಂದ್ರೂ ಸುಮ್ಮನಿದ್ದರು. ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿ ಇದ್ರೂ ಸರ್ಕಾರ ಏನೂ ಮಾಡಿಲ್ಲ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.
ಮಾಂಸ ತಿಂದು ದೇಗುಲಕ್ಕೆ ತೆರಳಿದ ವಿಚಾರ ಕುರಿತು ಸ್ಪಷ್ಟನೆ ನೀಡಿದ ಸಿದ್ಧರಾಮಯ್ಯ, ಮಾಂಸ ತಿನ್ನುವುದು ಬಿಡುವುದು ಅವರವರ ವೈಯಕ್ತಿಕ ವಿಚಾರ. ಇದೊಂದು ಚರ್ಚೆ ಮಾಡುವ ವಿಚಾರವೇ ಅಲ್ಲ. ಮಡಿಕೇರಿಯಲ್ಲಿ ನಾನು ಮಾಂಸ ತಿಂದಿಲ್ಲ. ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ. ನಾನು ಕೇವಲ ಅಕ್ಕಿರೊಟ್ಟಿ ಕಳಲೆ ಊಟ ಮಾಡಿದ್ದೆ. ನಾಟಿಕೋಳಿ ಮಾಂಸ ಮಾಡಿದ್ರು ನಾನು ತಿನ್ನಲಿಲ್ಲ ಎಂದು ಹೇಳಿದರು.