ಬೆಳಗಾವಿ: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಯಾರು ಪಾತ್ರ ವಹಿಸಿದ್ದಾರೆ ಎಂಬುದು ಮುಖ್ಯವಲ್ಲ. ಅಭಿನಯ ಮಾಡಿದ್ದು ಮುಖ್ಯ ಎಂದು ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕರ್ನಾಟಕ ರಾಜಕೀಯದಲ್ಲಿ ತಲೆ ತಗ್ಗಿಸುವ ಕೆಲಸವಾಗಿದ್ದು, ಇಡೀ ದೇವೇಗೌಡರ ಕುಟುಂಬವೇ ರಾಜಕೀಯಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಹಾಸನದ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣನ ಕರ್ಮಕಾಂಡದಿಂದ ಇಡೀ ಕರ್ನಾಟಕದ ರಾಜಕೀಯದ ಹೆಸರು ಕೆಟ್ಟಿದೆ ಎಂದರು.
ಈ ಚುನಾವಣೆ ನಂತರ ಪ್ರಧಾನಿ ನರೇಂದ್ರ ಮೋದಿ ಅವರೇ ಮುಂದುವರಿಸಿಕೊಂಡು ಹೋದರೆ ಲೋಕಸಭಾ, ವಿಧಾನಸಭಾ, ಸ್ಥಳೀಯ ಚುನಾವಣೆ ಒಂದೇ ಸಲ ನಡೆಯುವ ಹಾಗೆ ಮಾಡುತ್ತಾರೆ. ಇದು ವಿಪರ್ಯಾಸ. ತಂತ್ರಜ್ಞಾನ ಮುಂದುವರೆದ ಕಾಲದಲ್ಲಿ ಈ ಮೂರು ತಿಂಗಳುಗಳ ಕಾಲ ಚುನಾವಣೆ ನಡೆಸಿದ್ದು ಸರಿಯಲ್ಲ. ಬಹುಶಃ ಮೋದಿ ಅವರಿಗೆ ಉತ್ತರದಿಂದ ಕನ್ಯಾಕುಮಾರಿವರೆಗೂ ಚುನಾವಣೆಯ ಪ್ರಚಾರ ನಡೆಸಲು ಅನುಕೂಲ ಮಾಡಿಕೊಳ್ಳಲು ಚುನಾವಣಾ ಆಯೋಗ ಈ ರೀತಿ ಮಾಡಿರಬಹುದು ಎಂದು ಆರೋಪಿಸಿದರು.
ನರೇಂದ್ರ ಮೋದಿ ದೇಶದಲ್ಲಿ ಮಿಲಿಟರಿ ಆಡಳಿತ ತರಲು ಹೊರಟಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬದಲಾವಣೆ ಮಾಡುತ್ತಿದ್ದಾರೆ. ಚುನಾವಣಾ ಬಾಂಡ್ ದೇಶದ ಬಹು ದೊಡ್ಡ ಹಗರಣ. ಭ್ರಷ್ಟಾಚಾರ ವಿರುದ್ಧ ನಮ್ಮ ಸಮರ ಎನ್ನುವ ಬಿಜೆಪಿ ಇದರಲ್ಲಿ ಬಹುಪಾಲು ಹೊಂದಿದೆ ಎಂದರು.
ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದಿದ್ದರು. ಈಗ ಅವರ ಪಕ್ಕ ಕುಳಿತುಕೊಂಡು ಚುನಾವಣೆಯ ಪ್ರಚಾರ ನಡೆಸಿದ್ದಾರೆ ಎಂದು ಮೊಯ್ಲಿ ಟೀಕೆ ಮಾಡಿದರು.