ಮನೆ ಕಾನೂನು ಪ್ರಜ್ವಲ್‌ ರೇವಣ್ಣ ಪ್ರಕರಣ: ‘ವಿಡಿಯೊಗಳು ಅಸಲಿ’ ಎಂದು ಎಫ್‌ಎಸ್‌ಎಲ್‌ ಪರೀಕ್ಷೆಯಲ್ಲಿ ದೃಢ

ಪ್ರಜ್ವಲ್‌ ರೇವಣ್ಣ ಪ್ರಕರಣ: ‘ವಿಡಿಯೊಗಳು ಅಸಲಿ’ ಎಂದು ಎಫ್‌ಎಸ್‌ಎಲ್‌ ಪರೀಕ್ಷೆಯಲ್ಲಿ ದೃಢ

0

ಬೆಂಗಳೂರು : ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪದಡಿ ಮಾಜಿ ಸಂಸದ, ಜೆಡಿಎಸ್‌ ನ ಪ್ರಜ್ವಲ್‌ ರೇವಣ್ಣ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ‌ಹರಿದಾಡಿದ್ದ ‘ವಿಡಿಯೊಗಳು ಅಸಲಿ’ ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‌ಎಸ್‌ಎಲ್‌) ಪರೀಕ್ಷೆಯಲ್ಲಿ ದೃಢಪಟ್ಟಿದೆ.

Join Our Whatsapp Group

ಅತ್ಯಾಚಾರ ಪ್ರಕರಣ ದಾಖಲಾದ ಮೇಲೆ ‘ಅಶ್ಲೀಲ’ ವಿಡಿಯೊಗಳನ್ನು ತನಿಖಾಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದರು. ಎಲ್ಲ ವಿಡಿಯೊಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಎಫ್‌ಎಸ್‌ಎಲ್‌ ವರದಿಯು ಎಸ್ಐಟಿ ಅಧಿಕಾರಿಗಳ ಕೈಸೇರಿದ್ದು, ‘ವಿಡಿಯೊಗಳು ನೈಜವಾಗಿವೆ. ಯಾವುದೇ ರೀತಿಯ ತಿರುಚುವಿಕೆ ನಡೆದಿಲ್ಲ  ಎಂಬ ಉಲ್ಲೇಖ ವರದಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ವಿಡಿಯೊಗಳು ಅಸಲಿ ಎಂಬುದು ಗೊತ್ತಾಗಿದ್ದು, ವಿಡಿಯೊದಲ್ಲಿರುವ ವ್ಯಕ್ತಿ ಯಾರು ಎಂಬುದನ್ನು ತನಿಖೆಯಿಂದ ಪತ್ತೆ ಹಚ್ಚಬೇಕಿದೆ. ಅದರ ತನಿಖೆ ಮುಂದುವರಿದಿದೆ ಎಂದು ಮೂಲಗಳು ಹೇಳಿವೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದ ಅಶ್ಲೀಲ ವಿಡಿಯೊಗಳಲ್ಲಿ ಪುರುಷನ ಮುಖ ಪ್ರದರ್ಶಿಸಿಲ್ಲ. ಹೀಗಾಗಿ, ವಿಡಿಯೊದಲ್ಲಿರುವ ವ್ಯಕ್ತಿಗೂ, ಬಂಧಿತ ಆರೋಪಿಗೂ ಹೋಲಿಕೆ ಮಾಡಿ ತನಿಖೆ ನಡೆಸಲಾಗುತ್ತಿದೆ. ಈ ತನಿಖೆಯು ಮಹತ್ವದ್ದು ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪ ಪಟ್ಟಿ ಸಲ್ಲಿಕೆಗೆ ಸಿದ್ಧತೆ

ಪ್ರಕರಣದ ತನಿಖೆ ಚುರುಕುಗೊಳಿಸಲಾಗಿದೆ. ತನಿಖೆಯನ್ನು  ಶೀಘ್ರದಲ್ಲೇ ಪೂರ್ಣಗೊಳಿಸಿ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

‘ತನಿಖಾ ತಂಡದಲ್ಲಿದ್ದ ಕೆಲವು ಅಧಿಕಾರಿಗಳು ವರ್ಗಾವಣೆ ಆಗಿದ್ದರು. ತನಿಖೆ ಪೂರ್ಣಗೊಳಿಸುವ ಉದ್ದೇಶದಿಂದ ವರ್ಗಾವಣೆಗೊಂಡಿದ್ದ ಅಧಿಕಾರಿಗಳನ್ನು ಮತ್ತೆ ತನಿಖಾ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಆರೋಪದಲ್ಲಿ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ಮಂಜೂರು ಮಾಡಿದ್ದ ಜಾಮೀನು ರದ್ದುಪಡಿಸುವಂತೆ ಕೋರಿದ ಅರ್ಜಿಯ ಮೇಲಿನ ವಿಚಾರಣೆಯನ್ನು ಹೈಕೋರ್ಟ್‌ ಪೂರ್ಣಗೊಳಿಸಿದೆ.

ಈ ಸಂಬಂಧ ಎಸ್‌ಐಟಿ ಸಲ್ಲಿಸಿದ್ದ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಗುರುವಾರ ಸುದೀರ್ಘ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿರುವುದಾಗಿ ಪ್ರಕಟಿಸಿದರು.

ಎಸ್‌ಐಟಿ ಪರ ವಿಶೇಷ ಪ್ರಾಸಿಕ್ಯೂಟರ್ ಆದ ಹಿರಿಯ ವಕೀಲ ರವಿವರ್ಮ ಕುಮಾರ್ ಮತ್ತು ಎಚ್‌.ಡಿ.ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್‌ ವಾದ ಮಂಡಿಸಿದರು.

ದೋಷಾರೋಪ ಪಟ್ಟಿ ಸಲ್ಲಿಕೆ

ಪ್ರಜ್ವಲ್ ರೇವಣ್ಣ ಮೇಲೆ ಇರುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯ ಅಪಹರಣದ ಆರೋಪದಡಿ ಶಾಸಕ ಎಚ್‌.ಡಿ.ರೇವಣ್ಣ ಮತ್ತು ಏಳು ಜನರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಈ ಸಂಬಂಧ ಪ್ರಾಸಿಕ್ಯೂಷನ್‌ ಪರ ವಕೀಲರು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ (42ನೇ ಎಸಿಎಂಎಂ) ನ್ಯಾಯಾಲಯಕ್ಕೆ ಗುರುವಾರ ದೋಷಾರೋಪ ಪಟ್ಟಿ ಸಲ್ಲಿಸಿದರು. ಪಟ್ಟಿಯಲ್ಲಿ ಎಚ್‌.ಡಿ.ರೇವಣ್ಣ ಅವರ ಪತ್ನಿ ಭವಾನಿ 8ನೇ ಆರೋಪಿ ಎಂದು ಪರಿಗಣಿಸಲಾಗಿದೆ.

ದೋಷಾರೋಪ ಪಟ್ಟಿಯಲ್ಲಿ, ‘ರೇವಣ್ಣ ಮತ್ತು ಭವಾನಿ ಆಣತಿಯ ಮೇರೆಗೆ ಸಂತ್ರಸ್ತೆಯ ಅಪಹರಣ ಮಾಡಲಾಗಿದೆ. ಆಕೆಯನ್ನು ಹೊಳೆನರಸೀಪುರಕ್ಕೆ ಕರೆಸಿ ಬೆದರಿಕೆ ಹಾಕಿ, ಏಳನೇ ಆರೋಪಿಯ ಮನೆಯಲ್ಲಿ ಇರಿಸಲಾಗಿತ್ತು. ಏಳನೇ ಆರೋಪಿ ರೇವಣ್ಣ ಅವರ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಕೆಲಸ ಮಾಡುತ್ತಾ ಇದ್ದರು ಎಂಬಂತಹ ಅಂಶಗಳು ಒಳಗೊಂಡಿವೆ’ ಎಂದು ಪ್ರಾಸಿಕ್ಯೂಷನ್‌ ಮೂಲಗಳು ತಿಳಿಸಿವೆ.