ಮನೆ ಸ್ಥಳೀಯ ದೇವನಹಳ್ಳಿಯ ಭೂ ಸ್ವಾಧೀನದ ವಿರುದ್ಧ ಪ್ರಕಾಶ್ ರಾಜ್ ಆಕ್ರೋಶ : “ಕಾನೂನು ತೊಡಕೇ ಇಲ್ಲ,...

ದೇವನಹಳ್ಳಿಯ ಭೂ ಸ್ವಾಧೀನದ ವಿರುದ್ಧ ಪ್ರಕಾಶ್ ರಾಜ್ ಆಕ್ರೋಶ : “ಕಾನೂನು ತೊಡಕೇ ಇಲ್ಲ, ಹೋರಾಟ ತೀವ್ರಗೊಳ್ಳಲಿದೆ”

0

ಮೈಸೂರು: ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಬಳಿ ಕೆಐಎಡಿಬಿ ಮೂಲಕ ಕೈಗಾರಿಕಾ ಉದ್ದೇಶಕ್ಕಾಗಿ ೧೭೭೭ ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆಯಲು ಮುಂದಾಗಿದ್ದು, ಇದನ್ನು ಭೂ ಸ್ವಾಧೀನದಿಂದ ಕೈ ಬಿಡಲು ಯಾವುದೇ ಕಾನೂನು ತೊಡಕಿಲ್ಲ ಎಂದು ಬಹುಭಾಷ ನಟ ಪ್ರಕಾಶ್ ರಾಜ್ ಹೇಳಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸಂಯುಕ್ತ ಹೋರಾಟದಿಂದ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ ಅವರೊಂದಿಗೆ ಚರ್ಚಿಸಲಾಗಿದ್ದು, ಭೂ ಸ್ವಾಧೀನದಿಂದ ಕೈ ಬಿಡಲು ಯಾವುದೇ ಕಾನೂನು ತೊಡಕಿಲ್ಲವಾದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಮ್ಮ ಹಠಮಾರಿತನ, ಅಹಂಕಾರದಿಂದ ರಿಯಲ್ ಎಸ್ಟೆಟ್ ಕುಳಗಳು, ಭೂ ಮಾಫೀಯಾದವರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಈ ಭೂಮಿಯನ್ನು ರೈತರು ಬಿಡುವುದಿಲ್ಲ, ಈ ಹೋರಾಟ ತೀವ್ರವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಚನ್ನರಾಯಪಟ್ಟಣ ಭೂ ಸ್ವಾಧೀನ ಸಂಬಂಧ ಯಾವುದೇ ಪ್ರಕ್ರಿಯೆ ನಡೆಸುವುದಿಲ್ಲ ಎಂದು ಮಾತುಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಕ್ಷಣಾ ಸಚಿವರಿಗೆ ಡಿಫೆನ್ಸ್ ಕಾರಿಡಾರ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿ ದೇವನಹಳ್ಳಿ ಭೂ ಹೋರಾಟಗಾರರು, ರೈತ ನಾಯಕರು, ಸಾಹಿತಿಗಳು, ಕಲಾವಿದರಿಗೆ ಕೊಟ್ಟ ಮಾತನ್ನು ತಪ್ಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರಕಾಶ್ ರಾಜ್, ದೇವನಹಳ್ಳಿಯಲ್ಲಿ ೧೭೭೭ ಎಕರೆ ಭೂಮಿಯನ್ನು ವಶಕ್ಕೆ ಪಡೆಯುವುದಕ್ಕೆ ಸ್ಪಷ್ಟತೆ ಇಲ್ಲ. ಏನು ಮಾಡಬೇಕು ಗೊತ್ತಿಲ್ಲ. ರಿಯಲ್ ಎಸ್ಟೇಟ್‌ನವರಿಗೆ ಅನುಕೂಲ ಮಾಡುವ ಹುನ್ನಾರ ಎಂದು ಆರೋಪಿಸಿದರು.

ಜು. ೪ರ ಸಭೆಯಲ್ಲಿ ಸಿದ್ದರಾಮಯ್ಯ ಅವರು ರೈತರ ನಿಯೋಗಕ್ಕೆ ಭೂ ಸ್ವಾಧೀನದ ಯಾವುದೇ ಪ್ರಕ್ರಿಯೆ ನಡೆಸುವುದಿಲ್ಲ ಎಂದು ಭರವಸೆ ನೀಡಿದ್ದರು. ಕಾನೂನು ತೊಡಕುಗಳನ್ನು ಪರಿಶೀಲಿಸುವುದಾಗಿ ರೈತರಿಗೆ ಹೇಳಿ ೧೦ ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಈಗ ರಕ್ಷಣಾ ಸಚಿವರಿಗೆ ಡಿಫೆನ್ಸ್ ಕಾರಿಡಾರ್‌ಗೆ ಅನುಮತಿ ಕೋರಿ ರೈತರು ಅವರನ್ನು ಅಪನಂಬಿಕೆಯಿಂದ ನೋಡುವಂತೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ದೇವನಹಳ್ಳಿ ಭಾಗದ ೧೩ ಹಳ್ಳಿಯ ಹೆಣ್ಣು ಮಕ್ಕಳು ನಾವು ಮಣ್ಣು ಮಾರುವುದಿಲ್ಲ ಎಂದು ಘೋಷಿಸಿದ್ದಾರೆ. ಸಿದ್ದರಾಮಯ್ಯ ಅವರ ಆರೋಗ್ಯ ಚೆನ್ನಾಗಿರಲೆಂದು ದೇವನಹಳ್ಳಿ ಭೂಮಿಯಲ್ಲಿ ಬೆಳೆದ ಹಣ್ಣು, ತರಕಾರಿ ತಂದುಕೊಟ್ಟು ನಮ್ಮನ್ನು ಕೊಲ್ಲಬೇಡಿ ಎಂದು ಮನವಿ ಮಾಡಿದ್ದಾರೆ. ಆದರೆ, ನೀವು ಮಾಡಿದ್ದೇನೆ? ಇದೇನು ಸರ್ಕಾರದ ಅಹಂಕಾರದ ನಡೆ? ಅದೇನು ಹಠ ನಿಮ್ಮದು? ಎಂದು ಪ್ರಶ್ನಿಸಿದರು.

ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಜನಶಕ್ತಿ ಸಿದ್ದರಾಜು, ಹಿರಿಯ ರೈತ ಮುಖಂಡ ಎ.ಎಲ್.ಕೆಂಪೂಗೌಡ ಮುಂತಾದವರಿದ್ದರು.