ಮನೆ ಅಪರಾಧ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ತಲೆಮರೆಸಿಕೊಂಡಿರುವ ಆರೋಪಿಗಳ ಆಗಸ್ಟ್ 18ರೊಳಗೆ ಶರಣಾಗಲು ಎರಡನೇ ಬಾರಿಗೆ ಎನ್ಐಎ...

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ತಲೆಮರೆಸಿಕೊಂಡಿರುವ ಆರೋಪಿಗಳ ಆಗಸ್ಟ್ 18ರೊಳಗೆ ಶರಣಾಗಲು ಎರಡನೇ ಬಾರಿಗೆ ಎನ್ಐಎ ಗಡುವು

0

ಮಂಗಳೂರು: ಬಿಜೆಪಿ ಯುವ ಘಟಕದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಆಗಸ್ಟ್ 18ರೊಳಗೆ ಶರಣಾಗಲು ಗಡುವು ನೀಡಿದೆ. ಇಲ್ಲದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ತಿಳಿಸಿದೆ.

Join Our Whatsapp Group

ಎನ್‌ಐಎ ಈ ಹಿಂದೆ ಜೂನ್ 30ರೊಳಗೆ ಶರಣಾಗುವಂತೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿತ್ತು. ಆರೋಪಿಗಳು ತನಿಖಾ ಸಂಸ್ಥೆಯ ಮುಂದೆ ಶರಣಾಗಲು ವಿಫಲವಾದರೆ, ಅವರ ಆಸ್ತಿ ಮತ್ತು ಮನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಸಿತ್ತು. ಆದರೂ, ಆರೋಪಿಗಳು ಶರಣಾಗದೆ ತಲೆಮರೆಸಿಕೊಂಡಿದ್ದಾರೆ.

ಎನ್‌ಐಎ ತಂಡವು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಸೇರಿದಂತೆ ವಿವಿಧೆಡೆ ತಲೆಮರೆಸಿಕೊಂಡಿರುವ ಆರೋಪಿಗಳ ಮನೆಗಳ ಮುಂದೆ ನ್ಯಾಯಾಲಯದ ಆದೇಶದ ಪ್ರತಿಗಳನ್ನು ಅಂಟಿಸಿದೆ. ಸುಳ್ಯ ಹಾಗೂ ಕೊಡಗು ಭಾಗದಲ್ಲಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಧ್ವನಿವರ್ಧಕದ ಮೂಲಕ ಆರೋಪಿಗಳು ಆಗಸ್ಟ್‌ 18ರೊಳಗೆ ಶರಣಾಗುವಂತೆ ಎಚ್ಚರಿಕೆ ನೀಡಲಾಗಿದೆ.

ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ 21 ಮಂದಿ ವಿರುದ್ಧ ಎನ್ಐಎ ಪ್ರಕರಣ ದಾಖಲಿಸಿತ್ತು. ಈ ಸಂಬಂಧ ಐವರು ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಕಾರ್ಯಕರ್ತರ ಮನೆಗಳ ಮೇಲೆ ಎನ್‌ಐಎ ದಾಳಿ ನಡೆಸಿದ್ದು, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಕಳೆದ ವರ್ಷ ಜುಲೈ 26ರ ರಾತ್ರಿ ಮೋಟಾರ್ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೊಂದಿದ್ದರು.