ಮೈಸೂರು: ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಿಮಿತ್ಯ ಮತದಾನಕ್ಕೆ 48 ಗಂಟೆಗಳ ಮುನ್ನ ಅಂದರೆ ಮೇ. 09 ಮತ್ತು ಮೇ. 10 ರಂದು ಮುದ್ರಣ ಮಾಧ್ಯಮದಲ್ಲಿ ಯಾವುದೇ ಜಾಹೀರಾತು ನೀಡಲು ಜಿಲ್ಲಾ ಎಂಸಿಎಂಸಿ ಸಮಿತಿಯಿಂದ ಪೂರ್ವ ಪ್ರಮಾಣೀಕರಣ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಚುನಾವಣೆ ನಿಮಿತ್ಯದ ಮತದಾನ ದಿನದ ಪೂರ್ವದ 48 ಗಂಟೆಗಳ ಅವಧಿಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಮುದ್ರಣ ಮಾಧ್ಯಮದಲ್ಲಿ ಯಾವುದೇ ಪ್ರಚೋದಕ, ತಪ್ಪು ದಾರಿಗೆಳೆಯುವ ಅಥವಾ ದ್ವೇಷದ ಜಾಹೀರಾತುಗಳಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲಾಗಿದ್ದು, ಯಾವುದೇ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು, ಮತದಾನದ ದಿನ ಹಾಗೂ ಮತದಾನದ ಮುನ್ನಾ ದಿನದಂದು ಮುದ್ರಣ ಮಾಧ್ಯಮದಲ್ಲಿ ರಾಜಕೀಯ ಜಾಹೀರಾತುಗಳ ಮುದ್ರಣಕ್ಕಾಗಿ ಜಿಲ್ಲಾ ಮಟ್ಟದ ಎಂಸಿಎಂಸಿ ಸಮಿತಿಯಿಂದ ಪೂರ್ವ-ಪ್ರಮಾಣೀಕರಣ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಇದಕ್ಕಾಗಿ ಸಂಬಂಧಪಟ್ಟ ಅಭ್ಯರ್ಥಿಗಳು ತಾವು ಜಾಹೀರಾತು ನೀಡಲು ಉದ್ದೇಶಿಸಿರುವ ಜಾಹೀರಾತು ಹಾಗೂ ಪತ್ರಿಕೆಗಳ ಹೆಸರುಗಳ ವಿವರದೊಂದಿಗೆ ಅರ್ಜಿಯನ್ನು ಉದ್ದೇಶಿತ ದಿನಾಂಕಕ್ಕಿಂತ ಕನಿಷ್ಟ 02 ದಿನ ಮೊದಲು ಜಿಲ್ಲಾ ಎಂಸಿಎಂಸಿ ಸಮಿತಿಗೆ ಸಲ್ಲಿಸಬೇಕು. ಉಳಿದಂತೆ ಚುನಾವಣೆಯ ಎಲ್ಲ ಅವಧಿಯಲ್ಲಿಯೂ ಟಿ.ವಿ., ಕೇಬಲ್, ರೇಡಿಯೋ, ಸಾಮಾಜಿಕ ಜಾಲತಾಣ, ಡಿಜಿಟಲ್ ಮಾಧ್ಯಮ, ಇ-ಪೇಪರ್ ನಲ್ಲಿ ಜಾಹೀರಾತು ಪ್ರಕಟಿಸಲು ಜಿಲ್ಲಾ ಎಂಸಿಎಂಸಿ ಸಮಿತಿಯಿಂದ ಪೂರ್ವ ಪ್ರಮಾಣೀಕರಣ ಪಡೆಯುವುದು ಕಡ್ಡಾಯವಾಗಿರುತ್ತದೆ.
ಯಾವುದೇ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ರಾಜಕೀಯ ಜಾಹೀರಾತುಗಳ ವಿಷಯಗಳನ್ನು ಪೂರ್ವ-ಪ್ರಮಾಣೀಕರಿಸದ ಹೊರತು ಮತದಾನದ ದಿನದಂದು ಮತ್ತು ಮತದಾನದ ದಿನದ ಮುನ್ನಾ ದಿನದಂದು ಮುದ್ರಣ ಮಾಧ್ಯಮದಲ್ಲಿ ಯಾವುದೇ ಜಾಹೀರಾತುಗಳನ್ನು ಪ್ರಕಟಿಸುವುದನ್ನು ನಿರ್ಬಂಧಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.














