ಮನೆ ಕ್ರೀಡೆ ಬರೋಬ್ಬರಿ 827 ರನ್ಸ್: ಐಪಿಎಲ್’ನಲ್ಲಿ ಹೊಸ ಇತಿಹಾಸ ಸೃಷ್ಟಿ..!

ಬರೋಬ್ಬರಿ 827 ರನ್ಸ್: ಐಪಿಎಲ್’ನಲ್ಲಿ ಹೊಸ ಇತಿಹಾಸ ಸೃಷ್ಟಿ..!

0

ಕಳೆದ 15 ಸೀಸನ್ ಐಪಿಎಲ್’ನಲ್ಲಿ ಕಂಡರಿಯದ ಹಾಗೂ ಕೇಳರಿಯದ ವಿಶೇಷ ದಾಖಲೆಯೊಂದು ಭಾನುವಾರ ಸೃಷ್ಟಿಯಾಗಿದೆ. ಅದು ಅಂತಿಂಥ ದಾಖಲೆಯಲ್ಲ. ಬದಲಾಗಿ ಒಂದೇ ದಿನ 827 ರನ್[‘ಗಳ ಐತಿಹಾಸಿಕ ದಾಖಲೆ.

Join Our Whatsapp Group

ಒಂದು ತಂಡವು 200 ಅಥವಾ ಅದಕ್ಕಿಂತ ಹೆಚ್ಚಿನ ರನ್’ಗಳಿಸಿದರೆ ಪಂದ್ಯವು ಏಕಮುಖದತ್ತ ಸಾಗುವುದು ಸಾಮಾನ್ಯ. ಆದರೆ ಐಪಿಎಲ್’ನಲ್ಲಿ ಭಾನುವಾರ ನಡೆದ 41ನೇ ಹಾಗೂ 42ನೇ ಪಂದ್ಯಗಳು ಇದಕ್ಕೆ ತದ್ವಿರುದ್ಧವಾಗಿತ್ತು. ಎರಡೂ ಪಂದ್ಯಗಳು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು.

ಐಪಿಎಲ್’ನ 41ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಇಲ್ಲಿ ಟಾಸ್ ಗೆದ್ದ ಸಿಎಸ್ಕೆ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಡೆವೊನ್ ಕಾನ್ವೆ ಅವರ ಅಜೇಯ 92 ರನ್’ಗಳ ನೆರವಿನಿಂದ ಸಿಎಸ್’ಕೆ ತಂಡವು 4 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿತು.

201 ರನ್’ಗಳ ಬೃಹತ್ ಟಾರ್ಗೆಟ್ ಪಡೆದ ಪಂಜಾಬ್ ಕಿಂಗ್ಸ್ ಬ್ಯಾಟ್ಸ್’ಮನ್’ಗಳು ಕೂಡ ಭರ್ಜರಿ ಪ್ರದರ್ಶನ ನೀಡಿದ್ದರು. ಪರಿಣಾಮ ಪಂದ್ಯವು ಅಂತಿಮ ಓವರ್’ನತ್ತ ಸಾಗಿತು. ಕೊನೆಯ ಓವರ್’ನಲ್ಲಿ 9 ರನ್’ಗಳ ಟಾರ್ಗೆಟ್ ಪಡೆದ ಪಂಜಾಬ್ ಕಿಂಗ್ಸ್ ಅತ್ಯುತ್ತಮ ಹೋರಾಟ ನಡೆಸಿದರು. ಪರಿಣಾಮ ಕೊನೆಯ ಎಸೆತಗಳಲ್ಲಿ 3 ರನ್ಗಳ ಅವಶ್ಯಕತೆ, ಈ ಹಂತದಲ್ಲಿ ಪತಿರಾನ ಎಸೆತವನ್ನು ಲೆಗ್ ಸೈಡ್’ನತ್ತ ಬಾರಿಸಿ ಸಿಕಂದರ್ ರಾಝ 3 ರನ್ ಓಡಿದರು. ಇದರೊಂದಿಗೆ ಪಂಜಾಬ್ ಕಿಂಗ್ಸ್ 4 ವಿಕೆಟ್’ಗಳ ರೋಚಕ ಜಯ ಸಾಧಿಸಿತು.

ಅಂದರೆ ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಐಪಿಎಲ್’ನ 41ನೇ ಪಂದ್ಯದಲ್ಲಿ ಉಭಯ ತಂಡಗಳಿಂದ ಮೂಡಿಬಂದ ಒಟ್ಟು ಸ್ಕೋರ್ 401 ರನ್’ಗಳು.

ಇನ್ನು ಐಪಿಎಲ್’ನ 42ನೇ ಪಂದ್ಯದಲ್ಲೂ ಇಂತಹದ್ದೇ ಕುತೂಹಲಕಾರಿ ಪೈಪೋಟಿಗೆ ಮುಂಬೈನ ವಾಂಖೆಡೆ ಸ್ಟೇಡಿಯಂ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು.

ಆರ್’ಆರ್ ಪರ ಕಣಕ್ಕಿಳಿದ ಯುವ ಆರಂಭಿಕ ದಾಂಡಿಗ ಯಶಸ್ವಿ ಜೈಸ್ವಾಲ್ ಕೇವಲ 53 ಎಸೆತಗಳಲ್ಲಿ ಶತಕ ಸಿಡಿಸಿದರು. ಅಲ್ಲದೆ 62 ಎಸೆತಗಳಲ್ಲಿ 124 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 7 ವಿಕೆಟ್ ನಷ್ಟಕ್ಕೆ 212 ಕ್ಕೆ ತಂದು ನಿಲ್ಲಿಸಿದರು.

213 ರನ್’ಗಳ ಕಠಿಣ ಗುರಿ ಪಡೆದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ಮನ್ಗಳು ಸಾಂಘಿಕ ಪ್ರದರ್ಶನ ನೀಡಿದರು. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ 29 ಎಸೆತಗಳಲ್ಲಿ 55 ರನ್ ಬಾರಿಸಿ ಅಬ್ಬರಿಸಿದರು. ಪರಿಣಾಮ ಕೊನೆಯ ಓವರ್ನಲ್ಲಿ 17 ರನ್ಗಳ ಅವಶ್ಯಕತೆ. ಜೇಸನ್ ಹೋಲ್ಡರ್ ಎಸೆದ ಅಂತಿಮ ಓವರ್’ನ ಮೊದಲ 3 ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸುವ ಮೂಲಕ ಟಿಮ್ ಡೇವಿಡ್ ಮುಂಬೈ ಇಂಡಿಯನ್ಸ್ ತಂಡಕ್ಕೆ 6 ವಿಕೆಟ್ಗಳ ಜಯ ತಂದುಕೊಟ್ಟರು.

ಇಲ್ಲಿ ಮುಂಬೈ ಇಂಡಿಯನ್ಸ್ (214) ಹಾಗೂ ರಾಜಸ್ಥಾನ್ ರಾಯಲ್ಸ್ (212) ನಡುವಣ ಪಂದ್ಯದಲ್ಲಿ ಮೂಡಿಬಂದ ಒಟ್ಟು ಸ್ಕೋರ್ 426. ಅತ್ತ ಸಿಎಸ್ಕೆ (200) ಹಾಗೂ ಪಂಜಾಬ್ ಕಿಂಗ್ಸ್ (201) ಕಲೆಹಾಕಿದ್ದು 401 ರನ್ಗಳು. ನಾಲ್ಕು ತಂಡಗಳ ಒಟ್ಟಾರೆ ಸ್ಕೋರ್ 827 ರನ್’ಗಳು.

ಇದು ಐಪಿಎಲ್ ಇತಿಹಾಸದಲ್ಲೇ ಒಂದು ದಿನದಲ್ಲಿ ಮೂಡಿಬಂದ ಅತ್ಯಧಿಕ ಸ್ಕೋರ್ ಆಗಿದೆ. ಅಂದರೆ ಕಳೆದ 15 ಸೀಸನ್ ಐಪಿಎಲ್ನಲ್ಲಿ ಒಂದೇ ದಿನ ನಾಲ್ಕು ತಂಡಗಳು 200 ರನ್ ಕಲೆಹಾಕಿರಲಿಲ್ಲ. ಇದೀಗ ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ಒಟ್ಟು 827 ರನ್ ಗಳಿಸಿ ಐಪಿಎಲ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಹಿಂದಿನ ಲೇಖನರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಯುಪಿ ಮಾದರಿ ಜಾರಿ: ಯತ್ನಾಳ್
ಮುಂದಿನ ಲೇಖನಮತದಾನ ದಿನ, ಮತದಾನದ ಮುನ್ನಾ ದಿನ ಮುದ್ರಣ ಮಾಧ್ಯಮದಲ್ಲಿ ರಾಜಕೀಯ ಜಾಹೀರಾತುಗಳ ಮುದ್ರಣಕ್ಕಾಗಿ ಪೂರ್ವ-ಪ್ರಮಾಣೀಕರಣ ಅನುಮತಿ ಕಡ್ಡಾಯ