ನವದೆಹಲಿ : ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಂತಹ(ಯುಎಪಿಎ) ವಿಶೇಷ ಕಾನೂನುಗಳ ಅಡಿಯಲ್ಲಿಯೂ ಬರುವ ಅಪರಾಧಗಳಿಗೂ ‘ಜಾಮೀನು ಎಂಬುದು ನಿಯಮ, ಜೈಲು ಶಿಕ್ಷೆ ಎಂಬುದು ವಿನಾಯಿತಿ’ಎಂಬ ಕಾನೂನು ತತ್ವವು ಅನ್ವಯಿಸುತ್ತದೆ, ಕಠಿಣ ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿಯಲ್ಲಿ ಆರೋಪಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಈ ರೀತಿ ಹೇಳಿದೆ.
ಅರ್ಹ ಪ್ರಕರಣಗಳಲ್ಲೂ ನ್ಯಾಯಾಲಯ ಜಾಮೀನು ನಿರಾಕರಿಸುತ್ತಾ ಹೋದರೆ ಅದು ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗಲಿದೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಒಕಾ ಮತ್ತು ಆಗಸ್ಟೈನ್ ಜಾರ್ಜ್ ಮಸಿಹ್ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.
ಪ್ರಾಸಿಕ್ಯೂಷನ್ ಆರೋಪಗಳು ಅತ್ಯಂತ ಗಂಭೀರವಿರಬಹುದು. ಕಾನೂನಿನ ಪ್ರಕಾರ ಪ್ರಕರಣವನ್ನು ಜಾಮೀನಿಗೆ ಪರಿಗಣಿಸುವುದು ನ್ಯಾಯಾಲಯದ ಕರ್ತವ್ಯವಾಗಿದೆ. ವಿಶೇಷ ಕಾನೂನುಗಳ ಅಡಿಯಲ್ಲಿಯೂ ಬರುವ ಅಪರಾಧಗಳಿಗೂ ”ಜಾಮೀನು ಎಂಬುದು ನಿಯಮ, ಜೈಲು ಶಿಕ್ಷೆ ಎಂಬುದು ವಿನಾಯಿತಿ’’ ಎಂಬ ಕಾನೂನು ತತ್ವವು ಅನ್ವಯಿಸುತ್ತದೆ, ಅರ್ಹ ಪ್ರಕರಣಗಳಲ್ಲೂ ನ್ಯಾಯಾಲಯ ಜಾಮೀನು ತಿರಸ್ಕರಿಸುತ್ತಾ ಹೋದರೆ, ಆರ್ಟಿಕಲ್ 21ರ ಅಡಿಯಲ್ಲಿ ನೀಡಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಪೀಠ ಹೇಳಿದೆ.
ಜಲಾಲುದ್ದೀನ್ ಖಾನ್ ಎಂಬ ವ್ಯಕ್ತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿ ಕೋರ್ಟ್ ಈ ರೀತಿ ತೀರ್ಪು ನೀಡಿದೆ.
ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರಿಗೆ ತನ್ನ ಮನೆಯ ಮೇಲಿನ ಮಹಡಿಯನ್ನು ಬಾಡಿಗೆಗೆ ನೀಡಿದ್ದಕ್ಕಾಗಿ ಖಾನ್ ವಿರುದ್ಧ ಯುಎಪಿಎ ಮತ್ತು ಈಗ ನಿಷ್ಕ್ರಿಯಗೊಂಡಿರುವ ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಭಯೋತ್ಪಾದನೆ ಮತ್ತು ಹಿಂಸಾಚಾರದ ಕೃತ್ಯಗಳನ್ನು ನಡೆಸುವ ಉದ್ದೇಶದಿಂದ ಕ್ರಿಮಿನಲ್ ಸಂಚು ರೂಪಿಸಲಾಗಿದೆ. ಇದು ಭಯೋತ್ಪಾದನೆಯ ವಾತಾವರಣಕ್ಕೆ ಕಾರಣವಾಗುತ್ತದೆ ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಹೇಳಿತ್ತು. ಅಲ್ಲದೆ, ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿತ್ತು.