ರಾಯಚೂರು: ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿಯೊಬ್ಬರು ಮೃತಪಟ್ಟಿದ್ದು, ಈ ದಾರುಣ ಘಟನೆಯಿಂದ ಆಕ್ರೋಶಗೊಂಡ ಸಂಬಂಧಿಕರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಆಂಬುಲೆನ್ಸ್‌ವೊಂದನ್ನು ಧ್ವಂಸ ಮಾಡಿದ್ದಾರೆ.
ಮೃತರಾದ ಮಹಿಳೆಯನ್ನು ಸಿದ್ದಮ್ಮ ಎಂದು ಗುರುತಿಸಲಾಗಿದೆ. ಅವರ ಕುಟುಂಬದ ಸದಸ್ಯರು ಮತ್ತು ಸ್ಥಳೀಯರು ಆರೋಪಿಸಿದಂತೆ, ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಸ್ತ್ರೀರೋಗ ತಜ್ಞೆ ಡಾ. ಸೌಮ್ಯ ಗುಂಡಳ್ಳಿ ಅವರ ನಿರ್ಲಕ್ಷ್ಯವೇ ಸಿದ್ದಮ್ಮ ಸಾವಿಗೆ ಕಾರಣವಾಗಿದೆ. ಚಿಕಿತ್ಸೆ ತಡವಾಗಿದ್ದು, ತಕ್ಷಣಗೇ ನಿಗಾ ವಹಿಸದ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿಯ ಪ್ರಾಣ ಹಾರಿ ಹೋಗಿದೆ ಎಂದು ಸಂಬಂಧಿಕರು ದೂರಿದ್ದಾರೆ.
ಮೃತ ಮಹಿಳೆಯನ್ನು ತಕ್ಷಣ ಚಿಕಿತ್ಸೆಗೆ ಒಳಪಡಿಸಬೇಕಾದ್ದನ್ನು ವೈದ್ಯರು ವಿಳಂಬ ಮಾಡಿರುವುದು, ಹೆಚ್ಚಿನ ವೈದ್ಯಕೀಯ ಸಹಾಯ ಒದಗಿಸದಿರುವುದು ಸಂಬಂಧಿಕರಲ್ಲಿ ಆಕ್ರೋಶ ಮೂಡಿಸಿದೆ. ಈ ಹಿನ್ನೆಲೆ ನೂರಾರು ಮಂದಿ ಸ್ಥಳೀಯರು ಖಾಸಗಿ ನರ್ಸಿಂಗ್ ಹೋಮ್ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.
ಬಾಣಂತಿಯ ಸಂಬಂಧಿಕರು ಮತ್ತು ಪ್ರತಿಭಟನಾಕಾರರು ಆಸ್ಪತ್ರೆಯ ಪಕ್ಕದಲ್ಲಿ ನಿಂತಿದ್ದ ಆಂಬುಲೆನ್ಸ್‌ನ್ನು ಧ್ವಂಸಗೊಳಿಸಿದರು. ಕಲ್ಲು ತೂರಾಟ, ಹಾನಿ, ಹಲ್ಲೆಗಳ ರೀತಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತು.
ಘಟನೆಯ ಮಾಹಿತಿ ದೊರೆತ ತಕ್ಷಣ ಮಸ್ಕಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ಕ್ರಮ ಕೈಗೊಂಡಿದ್ದಾರೆ. ಹಾಗು ಪ್ರಕರಣ ದಾಖಲಿಸಿಕೊಂಡಿದ್ದಾರೆ.














