ಮೈಸೂರು: ವಿದ್ಯಾರಣ್ಯಪುರಂನಲ್ಲಿ ಇತ್ತೀಚೆಗೆ ಸರಗಳ್ಳತನ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಕಳೆದ ಎರಡು ತಿಂಗಳಿಂದ ವಿದ್ಯಾರಣ್ಯಪುರಂನಲ್ಲಿ ನಾಲ್ಕು ಸರಗಳ್ಳತನಗಳು ನಡೆದಿದ್ದು, ಇದರಿಂದಾಗಿ ಬಡಾವಣೆಯ ನಿವಾಸಿಗಳಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರಣ್ಯಪುರಂ ಪೊಲೀಸ್ ಠಾಣೆ ಹಾಗೂ ಮ.ವಿ. ರಾಮಪ್ರಸಾದ್ ಸ್ನೇಹ ಬಳಗದಿಂದ ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು. ವಿದ್ಯಾರಣ್ಯಪುರಂನ ಅಂದಾನಿ ಸರ್ಕಲ್‌ನಿಂದ ಆರಂಭಗೊಂಡ ಜಾಗೃತಿ ಕಾರ್ಯಕ್ರಮದಲ್ಲಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಯಿತು.
ಈ ವೇಳೆ ಮಾತನಾಡಿದ ನಗರ ಪಾಲಿಕೆ ಮಾಜಿ ಸದಸ್ಯ ಮ.ವಿ. ರಾಮಪ್ರಸಾದ್, ಸರಗಳ್ಳರು ಹೆಚ್ಚಾಗಿ ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಈ ಕೃತ್ಯಗಳನ್ನು ನಡೆಸಲಿದ್ದು, ಮಹಿಳೆಯರು, ವೃದ್ಧರು ಈ ಬಗ್ಗೆ ಎಚ್ಚರದಿಂದ ಇರಬೇಕಿದೆ. ಹೊರಗೆ ಓಡಾಡುವಾಗ ಆಭರಣ ಪ್ರದರ್ಶನ ಮಾಡದೆ, ತಮ್ಮ ಎಚ್ಚರಿಕೆಯಲ್ಲಿ ಇರಬೇಕಿದ್ದು, ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಕೂಡಲೇ ಪೊಲೀಸ್ ಸಹಾಯವಾಣಿ ೧೦೦ಕ್ಕೆ ಕರೆ ಮಾಡಬೇಕು. ಒಂಟಿಯಾಗಿ ಓಡಾಡದೆ ಗುಂಪಿನಲ್ಲಿ ಓಡಾಡಬೇಕಿದ್ದು, ವಾಯುವಿಹಾರ ಮಾಡುವಾಗ ನೆರೆ ಹೊರೆಯವರ ಜತೆ ಹೋಗಬೇಕು ಎಂದರು.
ಈ ಜಾಗೃತಿ ಅಭಿಯಾನವನ್ನು ಮುಂದಿನ ದಿನಗಳಲ್ಲಿ ಚಾಮುಂಡಿಪುರಂ, ವಿದ್ಯಾರಣ್ಯಪುರಂ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಬೀದಿನಾಟಕ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಪೊಲೀಸರು ಸರಗಳ್ಳರಿಗೆ ವಿರುದ್ಧ ಕಠಿಣ ಕಾನೂನು ಶಿಕ್ಷೆ ವಿಧಿಸಬೇಕು, ಪೊಲೀಸ್ ಭದ್ರತೆ ನೀಡಬೇಕು ಹಾಗೂ ಪೊಲೀಸ್ ಇಲಾಖೆಯಿಂದ ಸರಗಳ್ಳತನದ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯೆ ವಿದ್ಯಾ ಅರಸ್, ಸೋಮೇಶ್, ಮಂಜುನಾಥ್, ಧರ್ಮೇಂದ್ರ, ಶಿವು, ಮಂಜುಳಾ, ದೇವೇಂದ್ರ ಇತರರಿದ್ದರು.














