ಬೆಂಗಳೂರು(Bengaluru): ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ವಿ. ಕತ್ತಿ (62) ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು, ಕರ್ನಾಟಕದ ಅಭಿವೃದ್ಧಿಗೆ ಶ್ರೀ ಉಮೇಶ್ ಕತ್ತಿ ಜೀ ಅವರು ಉತ್ಕೃಷ್ಟ ಕೊಡುಗೆ ನೀಡಿದ್ದು, ಅವರು ಓರ್ವ ಅನುಭವಿ ನಾಯಕರಾಗಿದ್ದರು. ಅವರ ನಿಧನದಿಂದ ನೋವಾಗಿದೆ. ಈ ದುರಂತದ ಸಮಯದಲ್ಲಿ ನನ್ನ ಆಲೋಚನೆಗಳು ಅವರ ಕುಟುಂಬ ಮತ್ತು ಬೆಂಬಲಿಗರೊಂದಿಗಿವೆ ಎಂದು ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ತಮ್ಮ ಟ್ವೀಟ್’ನಲ್ಲಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವರಾದ ಉಮೇಶ್ ಕತ್ತಿ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಕುಟುಂಬವರ್ಗಕ್ಕೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪಕ್ಷದ ಹಿರಿಯ ನಾಯಕರು, ರಾಜ್ಯ ಸಚಿವರಾದ ಉಮೇಶ್ ಕತ್ತಿಯವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ದೇವರು ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ. ಸದ್ಗತಿ ಎಂದು ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಹ ಟ್ವೀಟ್ ಮಾಡಿದ್ದು, ಉಮೇಶ್ ಕತ್ತಿ ಅವರ ಅಕಾಲಿಕ ನಿಧನ ಅತೀವ ದುಖವನ್ನುಂಟು ಮಾಡಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ನಿಧನದ ದುಃಖವನ್ನು ಸಹಿಸುವ ಶಕ್ತಿಯನ್ನು ಬಂಧು ಮಿತ್ರರಿಗೆ ನೀಡಲಿ ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಕಳೆದ ರಾತ್ರಿ ಭೋಜನ ಸೇವಿಸಿದ ಬಳಿಕ ಬಾತ್ ರೂಂನಲ್ಲಿ ಸಚಿವರು ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಸಮೀಪದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ, ಅಷ್ಟರಲ್ಲೇ ಅವರ ಪ್ರಾಣಪಕ್ಷಿ ಹಾರಿಹೋಗಿದೆ.