ಶಿವಮೊಗ್ಗ(Shivamogga): ಸೋಗಾನೆ ಬಳಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣವನ್ನು ಫೆಬ್ರವರಿ 12ಕ್ಕೆ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಮಾಹಿತಿ ನೀಡಿದರು.
ನಗರದ ನವಲೆ, ಕೃಷಿ ಕಾಲೇಜು ಎದುರು ಚನ್ನಮುಂಬಾಪುರದಲ್ಲಿ ಜಿಲ್ಲಾ ಜಂಗಮ ಸಮಾಜದಿಂದ ನಿರ್ಮಿಸಲಾಗುತ್ತಿರುವ ಜಂಗಮ ಸಮಾಜದ ಸಾಂಸ್ಕೃತಿಕ ಭವನ ಶಿಲಾನ್ಯಾಸ ಹಾಗೂ ಭೂಮಿಪೂಜೆ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಅವರುಮಾತನಾಡಿದರು.
ಕಾಮಗಾರಿ ಮುಗಿಯುವ ಹಂತದಲ್ಲಿದೆ. ವಿಮಾನ ಹಾರಾಟಕ್ಕೆ ಎಲ್ಲಾ ರೀತಿಯ ಯೋಜನೆ ರೂಪಿಸಲಾಗಿದೆ. ಮುಂದಿನ ದಿನದಲ್ಲಿ ಈ ಭಾಗದ ಜನರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ಜಂಗಮ ಸಮಾಜ ಪವಿತ್ರವಾದುದು. ದೇವರಿಗೆ ಹಾಗೂ ಭಕ್ತರಿಗೆ ಸೇತುವೆಯಾಗಿ ಸಮಾಜ ಕೆಲಸ ಮಾಡುತ್ತಿದೆ. ದೇವರನ್ನುಹತ್ತಿರದಿಂದ ಕಾಣಲು ಗುರುಗಳಿಗೆ ಬಿಟ್ಟರೆ, ಜಂಗಮ ಸಮಾಜಕ್ಕೆ ಶಕ್ತಿ ಇದೆ. ಜಂಗಮ ಸಮಾಜದ ಸಾಂಸ್ಕೃತಿಕ ಭವನಕ್ಕೆ ₹1 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಶೀಘ್ರ ಕಾಮಗಾರಿ ಮುಗಿಸಿ, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.