ಮೈಸೂರು: ರಸ್ತೆಗಳ ಅಂಚಿನಲ್ಲಿರುವ ಶಾಲೆ ಹಾಗೂ ಕಾಲೇಜುಗಳ ಬಳಿ ಮಕ್ಕಳು ಒಟ್ಟಿಗೆ ಬರುತ್ತಾರೆ. ಅವರಿಗೆ ವಾಹನಗಳಿಂದ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸೂಚಿಸಿದರು.
ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಮಿಷಗಳ ಅಂತರದಲ್ಲಿ ತರಗತಿವಾರು ಮಕ್ಕಳನ್ನು ಶಾಲೆಯಿಂದ ಹೊರ ಬಿಡಬೇಕು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ನಿರ್ದೇಶನ ನೀಡಿ, ಕ್ರಮ ಕೈಗೊಳ್ಳಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿ ಹಾಗೂ ಗ್ರಾಮೀಣ ಭಾಗದಲ್ಲಿ 29 ಹಾಗೂ ನಗರದಲ್ಲಿ 12 ಬ್ಲಾಕ್‌ಸ್ಪಾಟ್’ಗಳನ್ನು (ಪದೇ ಪದೇ ಅಪಘಾತ ಆಗುವಂಥವು) ಗುರುತಿಸಲಾಗಿದೆ. 3ಕ್ಕಿಂತ ಹೆಚ್ಚು ಅಪಘಾತಗಳಾಗುವ ಸ್ಥಳಗಳನ್ನು ಬ್ಲಾಕ್’ಸ್ಪಾಟ್’ಗಳೆಂದು ಗುರುತಿಸಲಾಗಿದೆ. ಅಪಘಾತಗಳನ್ನು ನಿಯಂತ್ರಿಸಲು ವ್ಯವಸ್ಥೆ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಮಾರಣಾಂತಿಕ, ಮಾರಣಾಂತಿಕವಲ್ಲದ ಹಾಗೂ ಸಣ್ಣ ಅಪಘಾತಗಳ ಬಗ್ಗೆಯೂ ಸರಿಯಾದ ಮಾಹಿತಿ ನೀಡಬೇಕು. ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಚಾಲಕರು ಅತಿ ವೇಗವಾಗಿ ಬಸ್ ಚಲಾಯಿಸುತ್ತಿವುದು ನಮ್ಮ ಗಮನಕ್ಕೆ ಬಂದಿದೆ. ಇದರಿಂದ ಬಹಳ ದೊಡ್ಡ ಅಪಘಾತಗಳಾಗುವ ಸಾಧ್ಯತೆಗಳಿವೆ. ಚಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ರಾಜು, ಡಿಡಿಪಿಐ ರಾಮಚಂದ್ರರಾಜೇ ಅರಸ್, ಕೆಎಸ್’ಆರ್’ಟಿಸಿ ಅಧಿಕಾರಿ ಹೇಮಂತ್ ಕುಮಾರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ, ಡಿಡಿಪಿಯು ನಾಗಮಲ್ಲೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಹರೀಶ್ ಟಿ.ಕೆ. ಇದ್ದರು.