ಮನೆ ಕಾನೂನು ರೂಪಾ ಹಾಗೂ ಮಾಧ್ಯಮಗಳಿಗೆ ರೋಹಿಣಿ ವಿರುದ್ಧ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ತಾತ್ಕಾಲಿಕ ಪ್ರತಿಬಂಧಕಾದೇಶ

ರೂಪಾ ಹಾಗೂ ಮಾಧ್ಯಮಗಳಿಗೆ ರೋಹಿಣಿ ವಿರುದ್ಧ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ತಾತ್ಕಾಲಿಕ ಪ್ರತಿಬಂಧಕಾದೇಶ

0

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮುದ್ರಣ, ದೃಶ್ಯ ಮತ್ತು ಸಾಮಾಜಿಕ ಮಾಧ್ಯಮಗಳು ಮಾನಹಾನಿ ಸುದ್ದಿ ಪ್ರಕಟಿಸದಂತೆ ಬೆಂಗಳೂರು ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಗುರುವಾರ ತಾತ್ಕಾಲಿಕ ಏಕಪಕ್ಷೀಯ ಮಧ್ಯಂತರ ಪ್ರತಿಬಂಧಕಾದೇಶ ಮಾಡಿದೆ. ಇದೇ ವೇಳೆ, ಹಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಫಿರ್ಯಾದಿ ರೋಹಿಣಿ ಯಾವುದೇ ತೆರನಾದ ಅಭಿಪ್ರಾಯ ಅಥವಾ ಹೇಳಿಕೆಯನ್ನು ನೀಡುವಂತಿಲ್ಲ ಎಂದೂ ತಾಕೀತು ಮಾಡಿದೆ.

ರೋಹಿಣಿ ಸಿಂಧೂರಿ ಸಲ್ಲಿಸಿರುವ ಮಾನಹಾನಿ ದಾವೆಯ ವಿಚಾರಣೆಯನ್ನು ನಡೆಸಿದ 73ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಕೆ ಎಸ್ ಗಂಗಣ್ಣವರ್ ಅವರು ಮುದ್ರಣ, ದೃಶ್ಯ ಮತ್ತು ಸಾಮಾಜಿಕ ಮಾಧ್ಯಮಗಳು ಹಾಗೂ ರೂಪಾ ಅವರ ವಿರುದ್ಧ ಮಧ್ಯಂತರ ಪ್ರತಿಬಂಧಕಾದೇಶ ಮಾಡಿದರು.

“ಪ್ರತಿವಾದಿಗಳ ನಡೆ ಮತ್ತು ಅದರಿಂದ ಆಗುತ್ತಿರುವ ಹಾನಿಯ ಕುರಿತು ಫಿರ್ಯಾದಿ ಸಿಂಧೂರಿ ಅವರ ವಾದವನ್ನು ಪುರಸ್ಕರಿಸಿ, 1,2 ಮತ್ತು 4ರಿಂದ 60ನೇ ಪ್ರತಿವಾದಿಗಳ ವಿರುದ್ಧ ಮೇಲ್ನೋಟಕ್ಕೆ ಪ್ರಕರಣ ಕಾಣಿಸುತ್ತಿದೆ. ಹೀಗಾಗಿ, ಅವರ ವಿರುದ್ದ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಲಾಗಿದೆ. ಫಿರ್ಯಾದಿ ರೋಹಿಣಿ ಸಿಂಧೂರಿ ಸಿವಿಲ್ ಪ್ರಕ್ರಿಯಾ ಸಂಹಿತೆ ನಿಯಮ 3 (ಎ) ಅಡಿ ನಿಯಮ ಪಾಲಿಸಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“60ನೇ ಪ್ರತಿವಾದಿ ರೂಪಾ ಮೌದ್ಗಿಲ್ ಅವರಿಗೆ ತುರ್ತು ನೋಟಿಸ್ ಜಾರಿ ಮಾಡಬೇಕು. ಮೂರನೇ ಪ್ರತಿವಾದಿಯಾದ ಟಿವಿ 9/ನ್ಯೂಸ್ 9 ಕೇವಿಯಟ್ ಹಾಕಿದ್ದು, ಅವರು ತುರ್ತು ನೋಟಿಸ್ ಮತ್ತು ದಾವೆ ಸಮನ್ಸ್ಗೆ ಅರ್ಹರಾಗಿದ್ದಾರೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಫಿರ್ಯಾದಿ ರೋಹಿಣಿ ಮತ್ತು 60ನೇ ಪ್ರತಿವಾದಿ ರೂಪಾ ಅವರು ಸಾರ್ವಜನಿಕ ಸೇವಕರಾಗಿದ್ದು, ಸರ್ಕಾರದಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿದ್ದಾರೆ. ನಡತೆಯನ್ನು ನಿಯಂತ್ರಿಸುವ ಸೇವಾ ನಿಯಮಗಳನ್ನು ಅವಗಣನೆ ಮಾಡಲಾಗದು. ದುರದೃಷ್ಟಕರವೆಂದರೆ ಸಾರ್ವಜನಿಕ ಸೇವಕರ ನಡತೆಯು ಸಿವಿಲ್ ನ್ಯಾಯಾಲಯದ ವ್ಯಾಪ್ತಿಗೆ ಬಂದಿದೆ. ಪರಿಸ್ಥಿತಿ ಹೀಗಿರುವ ಹಿನ್ನೆಲೆಯಲ್ಲಿ ರೂಪಾ ವಿರುದ್ಧದ ತಾತ್ಕಾಲಿಕ ಪ್ರತಿಬಂಧಕಾದೇಶವು ಸಾರ್ವಜನಿಕ ಸೇವಕರ ನಡತೆ, ಕರ್ತವ್ಯ ಮತ್ತು ಕಾರ್ಯ ಚಟುವಟಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ. ಹೀಗಾಗಿ, ತಾತ್ಕಾಲಿಕ ಪ್ರತಿಬಂಧಕಾದೇಶದ ತುರ್ತು ನೋಟಿಸ್ ಅನ್ನು ರೂಪಾ ಅವರಿಗೆ ನೀಡಬೇಕು. ಹಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಫಿರ್ಯಾದಿ ರೋಹಿಣಿ ಯಾವುದೇ ತೆರನಾದ ಅಭಿಪ್ರಾಯ ಅಥವಾ ಹೇಳಿಕೆಯನ್ನು ನೀಡುವಂತಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ಸ್ಪಷ್ಟಪಡಿಸಿದೆ.

“ಫಿರ್ಯಾದಿ ರೋಹಿಣಿ ಪರ ವಕೀಲರು 3 ಮತ್ತು 60ನೇ ಪ್ರತಿವಾದಿಗೆ ತುರ್ತು ನೋಟಿಸ್ ಮತ್ತು ಸಮನ್ಸ್ ಅನ್ನು ತಲುಪಿಸಲಾಗುವುದು ಎಂದು ಹೇಳಿದ್ದಾರೆ, ಹೀಗಾಗಿ, ಮೂರನೇ ಪ್ರತಿವಾದಿಗೆ ತುರ್ತು ನೋಟಿಸ್ ಮತ್ತು ಸಮನ್ಸ್ ಜಾರಿ ಮಾಡಲಾಗಿದೆ. 3 ಮತ್ತು 60ನೇ ಪ್ರತಿವಾದಿಗಳು ಮಾರ್ಚ್ 7ರ ಒಳಗೆ ಆಕ್ಷೇಪಣೆ ಸಲ್ಲಿಸಬೇಕು. ಉಳಿದ ಪ್ರತಿವಾದಿಗಳು ಮಾರ್ಚ್ 17ರ ಒಳಗೆ ಆಕ್ಷೇಪಣೆ ಸಲ್ಲಿಸಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ.

ಫಿರ್ಯಾದಿ ರೋಹಿಣಿ ಅವರನ್ನು ನಕಾರಾತ್ಮಕ ಅಥವಾ ಮಾನಹಾನಿ ಉಂಟು ಮಾಡುವ ರೀತಿಯಲ್ಲಿ ಬಿಂಬಿಸುವ ಯಾವುದೇ ವಿಡಿಯೊ, ಚಿತ್ರ, ಅಭಿಪ್ರಾಯವನ್ನು ಪ್ರಕಟಿಸದಂತೆ ಪ್ರತಿವಾದಿಗಳ ವಿರುದ್ಧ ಏಕಪಕ್ಷೀಯ ಮಧ್ಯಂತರ ಆದೇಶ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಯಾರೆಲ್ಲಾ ಪ್ರತಿವಾದಿಗಳು: ಸುವರ್ಣ ನ್ಯೂಸ್ 24/7, ಫೋಕಸ್ ಟಿವಿ, ಟಿವಿ9 ಕನ್ನಡ ಮತ್ತು ನ್ಯೂಸ್ 9, ಬಿಟಿವಿ ನ್ಯೂಸ್, ಜನಶ್ರೀ ಟಿವಿ, ಕಸ್ತೂರಿ ನ್ಯೂಸ್, ಎನ್’ಡಿಟಿವಿ ನ್ಯೂಸ್, ಟೈಮ್ಸ್ ನೌ, ಇಂಡಿಯಾ ಟುಡೇ, ಉದಯ ನ್ಯೂಸ್, ಪ್ರಜಾ ಟಿವಿ, ಸಮಯ ನ್ಯೂಸ್, ರಾಜ್ ನ್ಯೂಸ್, ಈಟಿವಿ ಕನ್ನಡ, ದಿ ಟೈಮ್ಸ್ ಆಫ್ ಇಂಡಿಯಾ, ನಾನು ಗೌರಿ.ಕಾಂ, ಬೆಂಗಳೂರು ಮಿರರ್, ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ಡೆಕ್ಕನ್ ಕ್ರಾನಿಕಲ್, ಇಂಡಿಯನ್ ಎಕ್ಸ್’ಪ್ರೆಸ್, ದಿ ಹಿಂದೂ, ಕನ್ನಡ ಪ್ರಭ, ವಿಜಯ ಕರ್ನಾಟಕ, ವಿಜಯವಾಣಿ, ಸಂಜೆವಾಣಿ, ಈ ಸಂಜೆ, ಉದಯವಾಣಿ, ಹೊಸ ದಿಗಂತ, ಲಂಕೇಶ್ ಪತ್ರಿಕೆ, ಗೌರಿ ಲಂಕೇಶ್ ಜರ್ನಲ್, ಹಾಯ್ ಬೆಂಗಳೂರು, ಅಗ್ನಿ ಕನ್ನಡ, ಪರಶು ಕನ್ನಡ, ಸುದ್ದಿ ಟಿವಿ, ದಿಗ್ವಿಜಯ ನ್ಯೂಸ್, ಟಿವಿ 5, ವಿಶ್ವವಾಣಿ, ಪಬ್ಲಿಕ್ ಟಿವಿ, ಟಿವಿ1 ಕನ್ನಡ, ಆಜ್’ತಕ್, ಒನ್ ಇಂಡಿಯಾ ನ್ಯೂಸ್, ಟೈಮ್ಸ್ ಆಫ್ ಕರ್ನಾಟಕ, ವಾರ್ತಾ ಭಾರತಿ, ಗೂಗಲ್ ಎಲ್’ಎಲ್’ಸಿ, ಮೆಟಾ ಪ್ಲಾಟ್’ಫಾರ್ಮ್ ಇಂಕ್, ಯಾಹೂ ಇಂಡಿಯಾ, ಯೂಟ್ಯೂಬ್ ಎಲ್’ಎಲ್’ಸಿ, ವಾಟ್ಸಾಪ್, ಪವರ್ ಟಿವಿ, ಟ್ವಿಟರ್, ಇನ್’ಸ್ಟಾಗ್ರಾಂ, ಮುಕ್ತಾ ಟಿವಿ, ಜೈ ಕನ್ನಡಮ್ಮ, ಪಬ್ಲಿಕ್ ನ್ಯೂಸ್ 24, ರೂಪಾ ದಿವಾಕರ್ ಮೌದ್ಗಿಲ್ ಅವರನ್ನು ಕ್ರಮವಾಗಿ 1ರಿಂದ 60ನೇ ಪ್ರತಿವಾದಿಗಳನ್ನಾಗಿಸಲಾಗಿದೆ.

ಹಿಂದಿನ ಲೇಖನಟ್ರಕ್-ವ್ಯಾನ್ ನಡುವೆ ಡಿಕ್ಕಿ: 11 ಮಂದಿ ಸಾವು
ಮುಂದಿನ ಲೇಖನಬಿಜೆಪಿ ಸರ್ಕಾರ ರೈತರ ಆದಾಯ ವೃದ್ಧಿಗೆ ಕಟಿಬದ್ಧವಾಗಿದೆ: ಬಿ ಸಿ ಪಾಟೀಲ್