ಮನೆ ರಾಷ್ಟ್ರೀಯ ಗೆಳತಿಯ ಜೊತೆ ಎಂಗೇಜ್‌ ಆದ ಪ್ರಿಯಾಂಕಾ ಗಾಂಧಿ ಪುತ್ರ

ಗೆಳತಿಯ ಜೊತೆ ಎಂಗೇಜ್‌ ಆದ ಪ್ರಿಯಾಂಕಾ ಗಾಂಧಿ ಪುತ್ರ

0

ನವದೆಹಲಿ : ಕಾಂಗ್ರೆಸ್ ನಾಯಕಿ, ಸಂಸದೆ ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್ ವಾದ್ರಾ ಈಗ ತಮ್ಮ ಬಹುಕಾಲದ ಗೆಳತಿ ಅವಿವಾ ಬೇಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

25 ವರ್ಷದ ರೈಹಾನ್ ವಾದ್ರಾ ತನ್ನ ಬಹುಕಾಲದ ಗೆಳತಿ ಅವಿವಾ ಬೇಗ್‌ ಜೊತೆ ಹಸೆಮಣೆ ಏರೋದಕ್ಕೆ ಸಿದ್ಧರಾಗಿದ್ದಾರೆ. ಈ ಜೋಡಿ ಮದುವೆಗೆ ಎರಡೂ ಕಡೆ ಕುಟುಂಬದವರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಅವಿವಾ ಬೇಗ್ ಮತ್ತು ಅವರ ಕುಟುಂಬ ದೆಹಲಿಯಲ್ಲಿ ನೆಲೆಸಿದ್ದು, ಎರಡೂ ಕುಟುಂಬಗಳು ನಿಕಟ ಸಂಪರ್ಕದಲ್ಲಿವೆ.

ರೈಹಾನ್ ವಾದ್ರಾ ಒಬ್ಬ ದೃಶ್ಯ ಕಲಾವಿದ. 10 ವರ್ಷಗಳಿಂದ ತಮ್ಮ ಕ್ಯಾಮೆರಾ ಲೆನ್ಸ್ ಮೂಲಕ ಜಗತ್ತನ್ನು ಸೆರೆಹಿಡಿಯುತ್ತಿದ್ದಾರೆ. ಮುಂಬೈನ ಕೊಲಾಬಾದಲ್ಲಿರುವ ಸಮಕಾಲೀನ ಕಲಾ ಗ್ಯಾಲರಿಯಾದ ಎಪಿಆರ್‌ಇ ಆರ್ಟ್ ಹೌಸ್‌ನಲ್ಲಿ ಅವರ ಜೀವನ ಚರಿತ್ರೆ ಲಭ್ಯವಿದೆ. ಅವರ ಪೋರ್ಟ್‌ಫೋಲಿಯೊ ವನ್ಯಜೀವಿ ಸೇರಿದಂತೆ ಹಲವು ವಲಯಗಳನ್ನು ಒಳಗೊಂಡಿದೆ.

ತಾಯಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಂದ ಪ್ರೋತ್ಸಾಹ ಪಡೆದ ರೈಹಾನ್ ಬಾಲ್ಯದಿಂದಲೂ ಛಾಯಾಗ್ರಹಣದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಅವರ ಅಜ್ಜ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೂ ಛಾಯಾಗ್ರಹಣ ತುಂಬಾ ಇಷ್ಟವಿತ್ತು. ಅವಿವಾ ಬೇಗ್ ಕೂಡ ಛಾಯಾಗ್ರಾಹಕಿ ಮತ್ತು ನಿರ್ಮಾಪಕಿ. ಅವರ ಇನ್ಸ್ಟಾಗ್ರಾಮ್ ಬಯೋದಲ್ಲಿ ಈ ಮಾಹಿತಿ ಹೊರಬಿದ್ದಿದೆ.