ಮನೆ ಅಪರಾಧ ಬೆಂಗಳೂರಲ್ಲಿ ‘ಆಪರೇಷನ್ ಸಿಂಧೂರ್’ ಸಂಭ್ರಮಾಚರಣೆ ವೇಳೆ ಪಾಕ್ ಪರ ಘೋಷಣೆ: ಯುವಕನ ಬಂಧನ!

ಬೆಂಗಳೂರಲ್ಲಿ ‘ಆಪರೇಷನ್ ಸಿಂಧೂರ್’ ಸಂಭ್ರಮಾಚರಣೆ ವೇಳೆ ಪಾಕ್ ಪರ ಘೋಷಣೆ: ಯುವಕನ ಬಂಧನ!

0

ಬೆಂಗಳೂರು: ‘ಆಪರೇಷನ್ ಸಿಂಧೂರ್’ ಯಶಸ್ಸನ್ನು ಸಂಭ್ರಮಿಸುತ್ತಿದ್ದ ವೇಳೆ, ಪಾಕಿಸ್ತಾನ ಪರ ಘೋಷಣೆ ಕೂಗಿದ ಯುವಕನೊಬ್ಬನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಮೆಟ್ರೋ ನಗರದ ವೈಟ್‌ಫೀಲ್ಡ್‌ ಪ್ರದೇಶದಲ್ಲಿ ಸಂಭವಿಸಿದೆ.

ಮೇ 9ರ ರಾತ್ರಿ ಸುಮಾರು 12:30ರ ಸುಮಾರಿಗೆ, ವೈಟ್‌ಫೀಲ್ಡ್‌ನ ಪ್ರಶಾಂತ್ ಲೇಔಟ್‌ನಲ್ಲಿರುವ ಪಿಜಿಯೊಂದರಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಬಾಲ್ಕನಿಯಲ್ಲಿ ನಿಂತು, ಛತ್ತೀಸ್ಗಢ ಮೂಲದ ಯುವಕ ಶುಭಾಂಶು ಶುಕ್ಲಾ (26) ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗುತ್ತಿದ್ದನು ಎಂದು ದೂರಿಸಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಇನ್ನೊಬ್ಬ ಪಿಜಿ ನಿವಾಸಿ ಈ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ತಕ್ಷಣವೇ 112 ನಂಬರಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ.

ಆರೋಪಿತನಾದ ಶುಭಾಂಶು ಶುಕ್ಲಾ ಬೆಂಗಳೂರಿನಲ್ಲಿ ಟೆಕ್ಕಿಯಾಗಿ ಕೆಲಸ ಮಾಡಿಕೊಂಡಿದ್ದು, ಕೆಲ ಕಾಲದಿಂದ ಪಿಜಿಯಲ್ಲಿ ನೆಲೆಸಿದ್ದನು. ಆಪರೇಷನ್ ಸಿಂಧೂರ್ ಯಶಸ್ಸಿನ ಹಿನ್ನೆಲೆಯಲ್ಲಿ ನಗರದ ಹಲವು ಭಾಗಗಳಲ್ಲಿ ದೇಶಭಕ್ತಿಯ ಭಾವನೆ ಉತ್ತುಂಗಕ್ಕೆ ಏರಿದ ಸಮಯದಲ್ಲಿಯೇ ಈ ಘಟನೆ ನಡೆದಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಇಬ್ಬರು ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದರು. ಪರಿಶೀಲನೆಯ ವೇಳೆ ಶುಭಾಂಶು ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ದೃಢಪಟ್ಟಿದೆ. ಹೀಗಾಗಿ ವೈಟ್ಫೀಲ್ಡ್ ಠಾಣೆ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತನ ವಿರುದ್ಧ ದೇಶದ್ರೋಹ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.