ಮೈಸೂರು(Mysuru): ಮೈಸೂರು ವಿವಿಯ ಸ್ಪೋರ್ಟ್ಸ್ ಫೆವಲಿಯನ್ ನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಖೋ-ಖೋ ಪಂದ್ಯಾವಳಿಗೆ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಚಾಲನೆ ನೀಡಿದರು.
ಪಂದ್ಯಾವಳಿಗೆ ತುಂತುರು ಮಳೆ ಆರಂಭವಾದ್ದರಿಂದ ಹೊರಾಂಗಣದ ಎರಡು ಅಂಕಣಗಳು ತೇವಗೊಂಡ ಕಾರಣ ಒಳಂಗಾಣದಲ್ಲಿ ಉದ್ಘಾಟನಾ ಪಂದ್ಯ ನಡೆಯಿತು. ಉಳಿದ ಪಂದ್ಯಗಳು ಹೊರಾಂಗಣದಲ್ಲಿಯೇ ನಡೆಯಲಿವೆ. ಮೊದಲ ಪಂದ್ಯದಲ್ಲಿ ಮೈಸೂರು ತಂಡವು ಪಾಣಿಪತ್ ನ ಕುರುಕ್ಷೇತ್ರ ವಿಶ್ವವಿದ್ಯಾಲಯವನ್ನು 10–5ರಿಂದ ಮಣಿಸಿ ಶುಭಾರಂಭ ಮಾಡಿತು.
ಪಂದ್ಯಾವಳಿಯಲ್ಲಿ ದೇಶದ 4 ವಲಯಗಳಿಂದ ತಲಾ 4ರಂತೆ 16 ತಂಡಗಳು ಪಾಲ್ಗೊಳ್ಳಲಿವೆ. ದಕ್ಷಿಣ ವಲಯದಿಂದ ರಾಜ್ಯದ ಮೈಸೂರು, ಆಂಧ್ರ ಪ್ರದೇಶದ ಕಾಕತೀಯ ವಿಶ್ವವಿದ್ಯಾಲಯ, ಕೇರಳದ ಕ್ಯಾಲಿಕಟ್ ಹಾಗೂ ಕೇರಳ ವಿಶ್ವವಿದ್ಯಾಲಯಗಳು ಕಣದಲ್ಲಿವೆ. ಲೀಗ್ ಹಂತದಲ್ಲಿ ಒಟ್ಟು 16 ಪಂದ್ಯಗಳಿದ್ದು, ಜುಲೈ 6ರಂದು ನಾಕೌಟ್, ಸೆಮಿಫೈನಲ್– ಫೈನಲ್ ಪಂದ್ಯಗಳು 7ರಂದು ನಡೆಯಲಿವೆ.
ಕುಲಸಚಿವ ಪ್ರೊ.ಆರ್.ಶಿವಪ್ಪ, ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜು, ಹಣಕಾಸು ಅಧಿಕಾರಿ ಸಂಗೀತ ಗಜಾನನ, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಕೃಷ್ಣಯ್ಯ ಇದ್ದರು.