ಮನೆ ರಾಜಕೀಯ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ: ಜಲಧಾರೆ, ಮೇಕೆದಾಟು ಸೇರಿ ಪ್ರಮುಖ ವಿಷಯಗಳ ಕುರಿತು ಚರ್ಚೆ

ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ: ಜಲಧಾರೆ, ಮೇಕೆದಾಟು ಸೇರಿ ಪ್ರಮುಖ ವಿಷಯಗಳ ಕುರಿತು ಚರ್ಚೆ

0

ಬೆಂಗಳೂರು: ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನಮಂಡಲದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚೆ ನಡೆಸಲಾಯಿತು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಮುಖ್ಯವಾಗಿ ಮೇಕೆದಾಟು ಯೋಜನೆ ಬಗ್ಗೆ ಅನುಸರಿಸಬೇಕಾದ ಕಾರ್ಯತಂತ್ರ ಹಾಗೂ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕಿರುವ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಎಲ್ಲ ಸದಸ್ಯರು ಹಾಜರಿದ್ದ ಶಾಸಕಾಂಗ ಸಭೆಯಲ್ಲಿ ಕುಮಾರಸ್ವಾಮಿ ಅವರು ಕೆಲ ಮಹತ್ವದ ಸೂಚನೆಗಳನ್ನು ನೀಡಿದರು.

ಎಲ್ಲರೂ ಕಡ್ಡಾಯವಾಗಿ ಕಲಾಪದಲ್ಲಿ ಹಾಜರು ಇರಬೇಕು. ತಮ್ಮ ಕ್ಷೇತ್ರದ ಹಾಗೂ ರಾಜ್ಯದ ಸಮಸ್ಯೆಗಳನ್ನು ಪ್ರಸ್ತಾಪ ಮಾಡಿ, ಆ ಬಗ್ಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ಕಲಾಪದಲ್ಲಿ ಪಕ್ಷದ ನಿಲುವುಗಳನ್ನು ಪ್ರಬಲವಾಗಿ ಪ್ರತಿಪಾದಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.

ಜನತಾ ಜಲಧಾರೆ ಬಗ್ಗೆ ಚರ್ಚೆ:

ಪ್ರಮುಖವಾಗಿ ಜೆಡಿಎಸ್ ಪಕ್ಷ ಕೈಗೆತ್ತಿಕೊಂಡಿರುವ ಜನತಾ ಜಲಧಾರೆ ಗಂಗಾ ರಥಯಾತ್ರೆ ಬಗ್ಗೆ ಸಮಾಲೋಚನೆ ನಡೆಯಿತು.

ಆದಷ್ಟು ಬೇಗ ಗಂಗಾ ರಥಯಾತ್ರೆಯನ್ನು ಕೈಗೊಳ್ಳಬೇಕು ಎಂದು ಎಲ್ಲ ಶಾಸಕರು ಮನವಿ ಮಾಡಿದರು.

ಜಲಧಾರೆ ಯಾತ್ರೆಯೂ ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನೆರವಾಗುತ್ತದೆ. ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ರಾಜ್ಯಕ್ಕೆ ನೀಡಿರುವ ಆವಿಸ್ಮರಣೀಯ ಕೊಡುಗೆಗಳನ್ನು ಜನತೆಗೆ ತಿಳಿಸಬೇಕು ಎಂದು ಶಾಸಕರೆಲ್ಲರೂ ಅಭಿಪ್ರಾಯಪಟ್ಟರು.

ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಖಾಷೆಂಪೂರ,  ಸಚೇತಕರಾದ ವೆಂಕಟರಾವ್ ನಾಡಗೌಡ, ಗೋವಿಂದರಾಜು ಮುಂತಾದವರು ಹಾಜರಿದ್ದರು.

ಹಿಂದಿನ ಲೇಖನಐಶ್ ನಿರ್ದೇಶಕರ ವಿರುದ್ಧ ಸಿಬಿಐ ತನಿಖೆಗೆ ನಿವೃತ್ತ ಪ್ರಾಧ್ಯಾಪಕಿ ಡಾ.ಕೆ.ರಾಜಲಕ್ಷ್ಮಿ ಒತ್ತಾಯ
ಮುಂದಿನ ಲೇಖನಮೃತದೇಹ ತರುವ ಜಾಗದಲ್ಲಿ ಹೆಚ್ಚು ಮಂದಿಯನ್ನು ಕರೆ ತರಬಹುದು : ಅರವಿಂದ ಬೆಲ್ಲದ್