ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಾಹಿತಿ ಸಮ್ಮೇಳನ ಆಯೋಜಿಸಲು 20 ಕೋಟಿ ಅನುದಾನ ನೀಡಲಾಗುವುದು. ಕಾಸರಗೋಡು, ಅಕ್ಕಲಕೋಟೆ,ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲಾಗುವುದು. ಜೋಗ ಜಲಪಾತದಲ್ಲಿ 116 ಕೋಟಿ ವೆಚ್ಚದಲ್ಲಿ ಹೋಟೆಲ್, ರೋಪ್ ವೇ ಅಭಿವೃದ್ಧಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಅಗಲಿದ ಕವಿಗಳನ್ನು ನೆನೆದ ಸಿಎಂ
ಬಜೆಟ್ನಲ್ಲಿ ಘೋಷಿಸಿದಂತೆ ರಾಜ್ಯಮಟ್ಟದಲ್ಲಿ ಯಕ್ಷಗಾನ ಸಮ್ಮೇಳನ ಆಯೋಜಿಸಲಾಗುತ್ತದೆ. ಕಾಸರಗೋಡು, ಅಕ್ಕಲಕೋಟೆ, ಗೋವಾದಲ್ಲಿ ಕನ್ನಡ ಭವನ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು.. ತಳಸಮುದಾಯದ ವಿಶಿಷ್ಟ ಕಲೆಗಳ ಉತ್ತೇಜನಕ್ಕೆ ಸಾಂಸ್ಕೃತಿಕ ಶಿಬಿರ, ಪ್ರತೀ ವಿಭಾಗ ಮಟ್ಟದಲ್ಲಿ ಒಟ್ಟು 4 ಸಾಂಸ್ಕೃತಿಕ ಶಿಬಿರ ಆಯೋಜನೆ, ಕರ್ನಾಟಕದ ಹೆಸರಾಂತ ಸಾಹಿತಿಗಳ ಸಾಹಿತ್ಯ ಪ್ರಚಾರಕ್ಕೆ ಯೋಜನೆ ರೂಪಿಸಲಾಗುವುದು ಎಂದು ಅವರು ತಿಳಿಸಿದರು.
ಅಗಲಿದ ಕನ್ನಡದ ಹಿರಿಯ ಸಾಹಿತಿಗಳಾದ ಡಾ.ಸಿದ್ದಲಿಂಗಯ್ಯ, ಡಾ.ಎಂ.ಚಿದಾನಂದಮೂರ್ತಿ, ಚನ್ನವೀರ ಕಣವಿ, ಡಾ.ಚಂದ್ರಶೇಖರ ಪಾಟೀಲ್ ಅವರುಗಳ ಸಾಹಿತ್ಯವನ್ನು ಇನ್ನಷ್ಟು ಪ್ರಚಾರ ಮಾಡಲು ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.
ಕರ್ನಾಟಕದ ಐತಿಹಾಸಿಕ ಪ್ರಸಿದ್ಧ ಸ್ಥಳಗಳಾದ ಹಂಪಿ, ಬಾದಾಮಿ. ಐಹೊಳೆ, ಪಟ್ಟದಕಲ್ಲು, ವಿಜಯಪುರದ ಪ್ರವಾಸಿ ವೃತ್ತದ ಅಭಿವೃದ್ಧಿ ಮಾಡಲಾಗುವುದು. ಮೈಸೂರು, ಶ್ರೀರಂಗಪಟ್ಟಣ, ಹಾಸನ, ಬೇಲೂರು, ಹಳೇಬೀಡು ಪ್ರವಾಸಿ ವೃತ್ತ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಬೇಲೂರು, ಹಳೇಬೀಡು, ಸೋಮನಾಥಪುರ ಸೇರಿದಂತೆ ಹೊಯ್ಸಳ ಕಾಲದ ಸ್ಮಾರಕಗಳನ್ನು ಈವರ್ಷದಲ್ಲಿ ಯುನೆಸ್ಕೊ ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಘೋಷಿಸಿದ್ದಾರೆ.
ಕೊಪ್ಪಳದಲ್ಲಿ ಕೌದಿ ಮತ್ತು ಕಿನ್ಹಾಳ ಬೊಂಬೆ, ಮೈಸೂರಿನಲ್ಲಿ ಅಗರಬತ್ತಿ, ನವಲಗುಂದದಲ್ಲಿ ಜಮಖಾನಾ, ಚನ್ನಪಟ್ಟಣದಲ್ಲಿ ಆಟಿಕೆ ಹಾಗೂ ಇಳಕಲ್, ಗುಳೇದಗುಡ್ಡ, ಬೆಳಗಾವಿ – ಶಹಾಪುರ, ಶಿಡ್ಲಘಟ್ಟ ಮತ್ತು ಮೊಳಕಾಲ್ಮುರಿನಲ್ಲಿ ಸೀರೆ ಮೈಕ್ರೋ ಕ್ಲಸ್ಟರ್ನ್ನಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
2.30 ಲಕ್ಷ ಕಟ್ಟಡ ಕಾರ್ಮಿಕರ ಶ್ರೇಯೋಭಿವೃದ್ಧಿಗೆ 2610 ಕೋಟಿ ರೂ. ಗಳ ಯೋಜನೆಗಳ ಅನುಷ್ಠಾನ ಮಾಡಲಾಗುವುದು. ಕಟ್ಟಡ ಕಾರ್ಮಿಕರಿಗಾಗಿ 100 ಹೈಟೆಕ್ ಸಂಚಾರಿ ಕ್ಲಿನಿಕ್ ಪ್ರಾರಂಭ, ಕಟ್ಟಡ ಕಾರ್ಮಿಕರ ರಿಯಾಯಿತಿ ಬಸ್ ಪಾಸ್ ಯೋಜನೆ ರಾಜ್ಯಾದ್ಯಂತ ವಿಸ್ತರಣೆ, ಕೇಂದ್ರ ಸರ್ಕಾರದ ನೆರವಿನೊಂದಿಗೆ ಹುಬ್ಬಳ್ಳಿ ಮತ್ತು ದಾವಣಗೆರೆ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗಳ ಹಾಸಿಗೆಗಳ ಸಾಮರ್ಥ್ಯವನ್ನು 100ಕ್ಕೆ ಹೆಚ್ಚಳ ಮಾಡಲಾಗುವುದು. 19 ಹೊಸ ಚಿಕಿತ್ಸಾಲಯಗಳ ಪ್ರಾರಂಭ ಮಾಡುವುದಾಗಿ ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಘೋಷಿಸಿದ್ದಾರೆ.