ಮನೆ ಕಾನೂನು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆಗೆ ಸಮಸ್ಯೆಯೊಡ್ಡದ ಕ್ರೈಸ್ತಧರ್ಮ ಪ್ರಚಾರ ಕಾನೂನುಬಾಹಿರವಲ್ಲ: ತಮಿಳುನಾಡು ಸರ್ಕಾರ

ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆಗೆ ಸಮಸ್ಯೆಯೊಡ್ಡದ ಕ್ರೈಸ್ತಧರ್ಮ ಪ್ರಚಾರ ಕಾನೂನುಬಾಹಿರವಲ್ಲ: ತಮಿಳುನಾಡು ಸರ್ಕಾರ

0

ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ ಹಾಗೂ ನೈತಿಕತೆಗೆ ವಿರುದ್ಧವಾಗಿರದಂತೆ ತನ್ನ ಧರ್ಮವನ್ನು ಪ್ರಚಾರ ಮಾಡುವ ಮತ್ತು ಇತರರಿಗೆ ಬೋಧಿಸುವ ಹಕ್ಕನ್ನು ಸಂವಿಧಾನದ 25ನೇ ವಿಧಿ  ಪ್ರತಿಯೊಬ್ಬ ವ್ಯಕ್ತಿಗೂ ನೀಡಿದೆ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್’ನಲ್ಲಿ ಪ್ರತಿಪಾದಿಸಿದೆ.

Join Our Whatsapp Group

ಇದೆ ವೇಳೆ ಅದು ಬೆದರಿಕೆ, ವಂಚನೆ, ಪ್ರಚೋದನೆ, ಬಲಾತ್ಕಾರ, ಇಲ್ಲವೇ ಮಾಟಮಂತ್ರ ಅಥವಾ ಮೂಢನಂಬಿಕೆಯ ಮೂಲಕ ಆಮಿಷ ಒಡ್ಡಿ ಮಾಡುವ ಮತಾಂತರ ಅನ್ಯಾಯ ಮತ್ತು ಶೋಷಣೆಗೆ ಸಮ. ಆದ್ದರಿಂದ, ಕ್ರೈಸ್ತ ಧರ್ಮವನ್ನು ಖುದ್ದು ಪ್ರಚುರಪಡಿಸುವ ಮಿಷನರಿಗಳ ಕಾರ್ಯ ಕಾನೂನುಬಾಹಿರ ಅಥವಾ ಅಸಾಂವಿಧಾನಿಕವಲ್ಲ ಎಂದು ತಿಳಿಸಿದೆ.

ಬಲವಂತದ ಧಾರ್ಮಿಕ ಮತಾಂತರ ನಿಯಂತ್ರಿಸಲು ಕಠಿಣ ಕ್ರಮ ಜಾರಿಗೊಳಿಸುವಂತೆ ಕೋರಿದ್ದ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಅಫಿಡವಿಟ್ ಸಲ್ಲಿಸಲಾಗಿದೆ.

ತಮಿಳುನಾಡು ಸರ್ಕಾರದ ಅಫಿಡವಿಟ್’ನ ಪ್ರಮುಖಾಂಶಗಳು

ಸಂವಿಧಾನದ 25ನೇ ವಿಧಿ ಪ್ರತಿಯೊಬ್ಬ ಪ್ರಜೆಗೂ ತನ್ನ ಧರ್ಮವನ್ನು ಪ್ರಚಾರ ಮಾಡುವ ಹಕ್ಕನ್ನು ಒದಗಿಸುತ್ತದೆ. ಹೀಗಾಗಿ ಖುದ್ದಾಗಿ ಕ್ರೈಸ್ತ ಧರ್ಮ ಪ್ರಚಾರ ಮಾಡುವ ಮಿಷನರಿಗಳ ಕಾರ್ಯವನ್ನು ಕಾನೂನಿಗೆ ವಿರುದ್ಧವಾಗಿ ಪರಿಗಣಿಸಲಾಗದು.

• ಆದರೆ ಧರ್ಮ ಪ್ರಚಾರ ಕಾರ್ಯ ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಹಾಗೂ ಆರೋಗ್ಯಕ್ಕೆ ವಿರುದ್ಧವಾಗಿದ್ದರೆ ಹಾಗೂ  ಸಂವಿಧಾನದ ಭಾಗ IIIರ ಉಳಿದ ನಿಯಮಾವಳಿಗಳಿಗೆ ವಿರುದ್ಧವಾಗಿದ್ದಾರೆ ಆಗ ಅದನ್ನು ಗಂಭೀರವಾಗಿ ಪರಿಗಣಿಸಬೇಕು.

• ಜಾತ್ಯತೀತ ರಾಷ್ಟ್ರವಾದ ಭಾರತದಲ್ಲಿ ಪ್ರತಿಯೊಬ್ಬ ಪ್ರಜೆಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಇದ್ದು ಅವರು  ಯಾವುದೇ ಧರ್ಮವನ್ನು ಪಾಲಿಸಬಹುದಾಗಿದೆ.

• ಭಾರತದಲ್ಲಿ ಹಲವಾರು ಧರ್ಮಗಳನ್ನು ಅನುಸರಿಸುತ್ತಿರುವುದನ್ನು ಕಾಣಬಹುದು. ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಅವರ ಆಯ್ಕೆಯ ಧರ್ಮವನ್ನು ಅನುಸರಿಸುವ ಸ್ವಾತಂತ್ರ್ಯವನ್ನು ಒದಗಿಸಿದೆ. ಈ ಮೂಲಭೂತ ಹಕ್ಕಿನ ಪ್ರಕಾರ, ಪ್ರತಿಯೊಬ್ಬ ನಾಗರಿಕನಿಗೆ ತನ್ನ ಧರ್ಮವನ್ನು ಶಾಂತಿಯುತವಾಗಿ ಆಚರಿಸಲು ಮತ್ತು ಪ್ರಚುರಪಡಿಸಲು ಅವಕಾಶವಿದೆ. ನಿರ್ದಿಷ್ಟ ಧರ್ಮದಲ್ಲಿ ನಂಬಿಕೆ ಇಡುವುದನ್ನು ಸಂವಿಧಾನದ 21ನೇ ಪರಿಚ್ಛೇದದ ಅಡಿಯಲ್ಲಿ ಗುರುತಿಸಬಹುದಾಗಿದ್ದು ಅದು ಉಲ್ಲಂಘಿಸಲಾಗದ ಹಕ್ಕಾಗಿದೆ.

• ಅರ್ಜಿದಾರರು ಬಿಜೆಪಿಯ ಸದಸ್ಯರಾಗಿದ್ದು ಕೆಲ ಧರ್ಮಗಳನ್ನು ನಿಂದಿಸಲು ಮತ್ತು ತನ್ನ ನೀತಿಗೆ ತಕ್ಕಂತೆ ಆದೇಶಗಳನ್ನು ಪಡೆಯಲು ನ್ಯಾಯಾಲಯವನ್ನು ಬಳಸಿಕೊಳ್ಳುತ್ತಿರುವುದರಿಂದ ಇದು ಧಾರ್ಮಿಕ ಪ್ರೇರಿತ ಅರ್ಜಿಯಾಗಿದೆ. ಹೀಗಾಗಿ ಇದು ವಿಚಾರಣೆಗೆ ಯೋಗ್ಯವಲ್ಲ. 

•  ಅರ್ಜಿದಾರರು ಇದೇ ರೀತಿಯ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ನಿಂದ ಹಿಂಪಡೆದಿದ್ದರೂ ಪ್ರಸ್ತುತ ಅರ್ಜಿ ಸಲ್ಲಿಸುವಾಗ ಅದನ್ನು ಬಹಿರಂಗಪಡಿಸಿಲ್ಲ.

• ಅರ್ಜಿಯು ನಿಂದನೀಯ ಮತ್ತು ಅಶ್ಲೀಲ ಭಾಷೆಯನ್ನು ಒಳಗೊಂಡಿದ್ದು ಇದು ವಜಾಗೊಳಿಸಲು ಅರ್ಹವಾಗಿದೆ.

• ಇದಲ್ಲದೆ, ಐಪಿಸಿ ಸೆಕ್ಷನ್ 153 ಎ ಅಡಿಯಲ್ಲಿ ಶಿಕ್ಷಾರ್ಹ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಅರ್ಜಿದಾರರು ಪ್ರಾಮಾಣಿಕವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿಲ್ಲ. 

• ಅರ್ಜಿದಾರರು ಆಡಳಿತಾರೂಢ ರಾಜಕೀಯ ಪಕ್ಷಕ್ಕೆ ಸೇರಿದವರಾಗಿದ್ದು ಅದರ ವಕ್ತಾರರಾಗಿಯೂ ಕೆಲಸ ಮಾಡಿದ್ದಾರೆ. ಈ ಹಿಂದೆಯೂ ಇದೇ ರೀತಿಯ ಕ್ಷುಲ್ಲಕ ಅರ್ಜಿಗಳನ್ನು ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ತಮ್ಮ ಪಕ್ಷದ ಕಾರ್ಯಸೂಚಿಯಿಂದ ಪ್ರೇರಿತರಾಗಿ ಸಲ್ಲಿಸಿದ್ದಾರೆ. ಇದಕ್ಕಾಗಿ ಸುಪ್ರೀಂ ಕೋರ್ಟ್ನಿಂದ ಟೀಕೆಯನ್ನೂ ಎದುರಿಸಿದ್ದಾರೆ.

ಹಿಂದಿನ ಲೇಖನವಿಧಾನಸಭಾ ಚುನಾವಣೆ: ಅಂಚೆ ಮತಪತ್ರಗಳ ನಿರ್ವಹಣೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸರ್ವ ಪ್ರಯತ್ನ
ಮುಂದಿನ ಲೇಖನಶ್ರೀ ಕನಕಧಾರಾ ಸ್ತೋತ್ರಂ