ಮನೆ ಕಾನೂನು ತಲೆಮರೆಸಿಕೊಂಡಿರುವ ಆರೋಪಿಯ ಪೋಷಕರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ: ಅಲಾಹಾಬಾದ್ ಹೈಕೋರ್ಟ್

ತಲೆಮರೆಸಿಕೊಂಡಿರುವ ಆರೋಪಿಯ ಪೋಷಕರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ: ಅಲಾಹಾಬಾದ್ ಹೈಕೋರ್ಟ್

0

ತಲೆಮರೆಸಿಕೊಂಡಿದ್ದಾರೆಂದು ಘೋಷಿಸಲಾದ ಆರೋಪಿಗಳ ಆಸ್ತಿ ಆತನಿಗೆ ಸೇರದೆ ಆತ ಅಲ್ಲಿ ಕೇವಲ ವಾಸಿಸುತ್ತಿದ್ದ ಎಂದ ಮಾತ್ರಕ್ಕೆ ಆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯ ಆದೇಶಿಸುವಂತಿಲ್ಲ ಎಂದು ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ಹೇಳಿದೆ.

Join Our Whatsapp Group

ತಲೆಮರೆಸಿಕೊಂಡಿರುವುದಾಗಿ ಘೋಷಿಸಲ್ಪಟ್ಟ ವ್ಯಕ್ತಿ ವಾಸಿಸುತ್ತಿದ್ದ ಎರಡು ಕೊಠಡಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಅಬ್ದುಲ್ ಮೊಯಿನ್ ಅವರು ಈ ವಿಚಾರ ತಿಳಿಸಿದ್ದಾರೆ.  ಆಸ್ತಿಯು ಆರೋಪಿಯ ತಂದೆಗೆ ಸೇರಿದ್ದಾಗಿತ್ತು.

ಸಿಆರ್‌ಪಿಸಿ ಸೆಕ್ಷನ್‌ 83ರ ಒಪ್ರಕಾರ ಪರಾರಿಯಾಗಿರುವ ವ್ಯಕ್ತಿಯ ಆಸ್ತಿಯನ್ನಷ್ಟೇ ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.

ಜುಲೈ 2023ರ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ತಲೆಮರೆಸಿಕೊಂಡಿರುವುದಾಗಿ ಘೋಷಿಸಲ್ಪಟ್ಟ ವ್ಯಕ್ತಿಯ ತಂದೆ  ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.

ಮೇಲ್ಮನವಿದಾರ ಫೈಯಾಜ್ ಅಬ್ಬಾಸ್, ಅವರ ಪತ್ನಿ ಗುಡ್ಡೋ ಮತ್ತು ಮಗ ಫೈಜ್ ಅಬ್ಬಾಸ್ 2015ರ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಮೇಲ್ಮನವಿದಾರನ ಮಗ (ಫೈಜ್ ಅಬ್ಬಾಸ್) ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಕಳೆದ ವರ್ಷ ಆತನನ್ನು ತಲೆಮರೆಸಿಕೊಂಡ ಆರೋಪಿ ಎಂದು ಘೋಷಿಸಿದ್ದ ವಿಚಾರಣಾ ನ್ಯಾಯಾಲಯ ಆತ ತನ್ನ ತಂದೆಯ ಆಸ್ತಿಯಲ್ಲಿ ವಾಸಿಸುತ್ತಿದ್ದ ಎರಡು ಕೊಠಡಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿತ್ತು.

ಆದರೆ ಆದೇಶವನ್ನು ವಿರೋಧಿಸಿದ ಮೇಲ್ಮನವಿದಾರ ತಾನಷ್ಟೇ ಮನೆಯ ಮಾಲೀಕನಾಗಿದ್ದು ತನ್ನ ಮಗ ಫೈಜ್‌ಗೂ ಈ ಆಸ್ತಿಗೂ ಸಂಬಂಧವಿಲ್ಲ ಎಂದಿದ್ದರು. ವಾದವನ್ನು ವಿಚಾರಣಾ ನ್ಯಾಯಾಲಯ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಆದರೆ, ಸಿಆರ್‌ಪಿಸಿ ಸೆಕ್ಷನ್ 83ರ ಅಡಿಯಲ್ಲಿ ತಲೆಮರೆಸಿಕೊಂಡಿರುವುದಾಗಿ ಘೋಷಿಸಲ್ಪಟ್ಟ ವ್ಯಕ್ತಿಯ ಆಸ್ತಿಯನ್ನು ಮಾತ್ರ ಮುಟ್ಟುಗೋಲು ಹಾಕಿಕೊಳ್ಳಬಹುದಾದ್ದರಿಂದ ವಿಚಾರಣಾ ನ್ಯಾಯಾಲಯ  ಆಕ್ಷೇಪಣೆಯನ್ನು ಪರಿಗಣಿಸಬೇಕು ಎಂದು ಹೈಕೋರ್ಟ್ ಹೇಳಿದೆ.

ಆರೋಪಿ ವಾಸವಿದ್ದ ಎರಡು ಕೊಠಡಿಗಳನ್ನಷ್ಟೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂಬ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರ ತೀರ್ಪೂ ಅರ್ಥಹೀನ ಎಂದು ಅದು ಕಿವಿ ಹಿಂಡಿತು.

ಈ ಅವಲೋಕನಗಳೊಂದಿಗೆ ಮೇಲ್ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್‌ ಮುಟ್ಟುಗೋಲು ಆದೇಶವನ್ನು ರದ್ದುಗೊಳಿಸಿತು.