ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂದು (ಫೆ.14) ತೆರಿಗೆ ಬಾಕಿ ಉಳಿಸಿಕೊಂಡಿರುವ ರಾಕ್ ಲೈನ್ ಮಾಲ್ ಗೆ ಬೀಗಮುದ್ರೆ ಹಾಕಿದೆ.
ನಟ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಒಡೆತನದ ಟಿ.ದಾಸರಹಳ್ಳಿಯ ಪ್ರಶಾಂತ್ ನಗರದಲ್ಲಿರುವ ರಾಕ್ ಲೈನ್ ಮಾಲ್ 2011 ರಿಂದ 2023ರವರೆಗೆ 11.51 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಿಬಿಎಂಟಿ ನೋಟಿಸ್ ನೀಡಿತ್ತು.
ನೋಟಿಸ್ ನೀಡಿದರೂ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ದಾಸರಹಳ್ಳಿಯ ಬಿಬಿಎಂಪಿ ಕಂದಾಯ ಅಧಿಕಾರಿಗಳು ಮಾಲ್ ಗೆ ಬೀಗ ಹಾಕಿದ್ದಾರೆ.
2023ರ ನವೆಂಬರ್ ಮತ್ತು 2024ರ ಫೆಬ್ರವರಿ ನಡುವೆ 46,318 ಆಸ್ತಿಗಳಿಗೆ ತೆರಿಗೆ ಬಾಕಿ ವಸೂಲಿಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ. ಬಿಬಿಎಂಪಿ ಕಂದಾಯ ಅಧಿಕಾರಿಗಳು ನಿವೇಶನಗಳನ್ನು ಸೀಲ್ ಮಾಡಿದರೂ ತೆರಿಗೆ ಪಾವತಿಸದ ಪ್ರಕರಣಕ್ಕೆ ಸಂಬಂಧಿಸಿದ 7,203 ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ.















