ಮೈಸೂರು(Mysuru): ‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ ಪ್ರಯುಕ್ತ ಶುಕ್ರವಾರ ‘ಭಾರತೀಯ ಚಲನಚಿತ್ರೋತ್ಸವ’ಕ್ಕೆ ನಟ ದೊಡ್ಡಣ್ಣ ಚಾಲನೆ ನೀಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್, ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2023ರ ಮಾರ್ಚ್’ನಲ್ಲಿ ನಡೆಯಲಿದೆ. ಮೈಸೂರಿನಲ್ಲೂ ಸಾಕ್ಷ್ಯಚಿತ್ರೋತ್ಸವ ಆಯೋಜಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಹೇಳಿದರು.
ರಂಗಾಯಣದಲ್ಲಿ ವಿಶ್ವ ಸಿನಿಮಾಗಳ ಪ್ರದರ್ಶನವು ಬೆಂಗಳೂರಿನಾಚೆಗೂ ವಿಸ್ತರಿಸಬೇಕು. ಮೈಸೂರು ಸಾಂಸ್ಕೃತಿಕ ನಗರಿಯಾಗಿದ್ದು, ರಂಗಾಯಣದ ಸಹಯೋಗದೊಂದಿಗೆ ಉತ್ಸವ ಮಾಡಲು ಯೋಜಿಸಲಾಗುವುದು ಎಂದರು.
ಬಹುರೂಪಿಯಲ್ಲಿ ಕಳೆದ 2 ದಶಕದಿಂದ ಚಲನಚಿತ್ರೋತ್ಸವ ಆಯೋಜಿಸುತ್ತಿರುವುದು ಅಭಿನಂದನೀಯ. ಪ್ರೊಜೆಕ್ಟರ್ ಸೇರಿದಂತೆ ಪ್ರದರ್ಶನಕ್ಕೆ ಬೇಕಾದ ಎಲ್ಲ ಪರಿಕರಗಳನ್ನು ಅಕಾಡೆಮಿಯಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.
ಬಹುರೂಪಿ ಚಲನಚಿತ್ರೋತ್ಸವಕ್ಕೆ ನೀಡಲು ಹಣವಿಲ್ಲವೆಂದು ಅಕಾಡೆಮಿಯ ಅಧಿಕಾರಿಗಳು ಹೇಳಿದ್ದರೂ, ವೈಯಕ್ತಿಕವಾಗಿ ಹಣ ನೀಡಿದ್ದೇನೆ. ಸರ್ಕಾರ ಮುಂದೆಯೂ ಕೊಡಲಿ, ಬಿಡಲಿ ಒಳ್ಳೆಯ ಕೆಲಸಗಳಿಗೆ ಹಣ ನೀಡಲು ಹಿಂದು– ಮುಂದು ನೋಡಬಾರದು ಎಂದು ಅಭಿಪ್ರಾಯಪಟ್ಟರು.
20 ಸಾವಿರಕ್ಕೂ ಹೆಚ್ಚು ವಿಶ್ವ ಸಿನಿಮಾಗಳ ಡಿವಿಡಿಗಳ ವೈಯಕ್ತಿಕ ಸಂಗ್ರಹವಿದ್ದು, ರಂಗಾಯಣಕ್ಕೆ ಹಸ್ತಾಂತರಿಸಲಾಗುವುದು. ಅದರಿಂದ ವಿದ್ಯಾರ್ಥಿಗಳು ಹಾಗೂ ನಾಗರಿಕರಿಗೆ ಸಿನಿಮಾ ಪ್ರಜ್ಞೆ ಬೆಳೆಯುತ್ತದೆ ಎಂದು ತಿಳಿಸಿದರು.