ಪಟ್ನಾ(Patna): ಸೇನೆಯ ಅಲ್ಪಾವಧಿ ನೇಮಕಾತಿ ಯೋಜನೆ ‘ಅಗ್ನಿಪಥ’ ವಿರುದ್ಧ ಬಿಹಾರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಶುಕ್ರವಾರ ಮತ್ತಷ್ಟು ತೀವ್ರಗೊಂಡಿದ್ದು, ಉದ್ಯೋಗಾಕಾಂಕ್ಷಿಗಳು ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆತಿಯಾದಲ್ಲಿರುವ ಉಪಮುಖ್ಯಮಂತ್ರಿ ರೇಣು ದೇವಿ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಘಟನೆ ಕುರಿತು ಮಾತನಾಡಿರುವ ರೇಣು ದೇವಿ ಪುತ್ರ, ‘ಬೆತಿಯಾದಲ್ಲಿರುವ ನಮ್ಮ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಇದರಿಂದ ನಮಗೆ ಸಾಕಷ್ಟು ಹಾನಿಯಾಗಿದೆ. ತಮ್ಮ ತಾಯಿ ಪಟ್ನಾದಲ್ಲಿದ್ದಾರೆ’ ಎಂದು ತಿಳಿಸಿದ್ದಾರೆ.
ಅಗ್ನಿಪಥ ಯೋಜನೆ ವಿರುದ್ಧ ಬಿಹಾರ ಮಾತ್ರವಲ್ಲದೆ, ಉತ್ತರ ಪ್ರದೇಶದ, ರಾಜಸ್ಥಾನ, ತೆಲಂಗಾಣ ಹಾಗೂ ಹರಿಯಾಣದಲ್ಲಿಯೂ ಪ್ರತಿಭಟನೆಗಳು ನಡೆಯುತ್ತಿವೆ.
ಸೇನಾ ಪಡೆಗಳಿಗೆ ಯುವ ಜನರನ್ನು ನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳುವ ‘ಅಗ್ನಿಪಥ ಯೋಜನೆ’ಯನ್ನು ಕೇಂದ್ರ ಸರ್ಕಾರವು ಮಂಗಳವಾರ ಪ್ರಕಟಿಸಿತ್ತು. ಇದಕ್ಕೆ ಪ್ರತಿಪಕ್ಷಗಳಿಂದಲೂ ವಿರೋಧ ವ್ಯಕ್ತವಾಗಿದೆ.