ಮನೆ ಸುದ್ದಿ ಜಾಲ ಬಾರ್‌, ಲಾಡ್ಜ್‌ ತೆರೆಯದಂತೆ ಒತ್ತಾಯಿಸಿ ಪ್ರತಿಭಟನೆ

ಬಾರ್‌, ಲಾಡ್ಜ್‌ ತೆರೆಯದಂತೆ ಒತ್ತಾಯಿಸಿ ಪ್ರತಿಭಟನೆ

0

ಪಿರಿಯಾಪಟ್ಟಣ (Piriyapatna)-ತಾಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮದ ಪಿರಿಯಾಪಟ್ಟಣ- ಹಾಸನ ರಾಜ್ಯ ಹೆದ್ದಾರಿಯಲ್ಲಿ ಮದ್ಯದಂಗಡಿ ಮತ್ತು ಲಾಡ್ಜ್ ತೆರೆಯುತ್ತಿರುವುದನ್ನು ವಿರೋಧಿಸಿ ಹಿಟ್ನೆ ಹೆಬ್ಬಾಗಿಲು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಮದ್ಯದಂಗಡಿ ಮತ್ತು ಲಾಡ್ಜ್‌ ತೆರೆಯಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಎನ್.ಓ.ಸಿ (ಪರವಾನಗಿ) ನೀಡಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯ ಹೆಚ್.ಎಸ್.ಕುಮಾರ್ ಮಾತನಾಡಿ, ಹಿಟ್ನೆ ಹೆಬ್ಬಾಗಿಲು ಗ್ರಾಮವು ಬಹುತೇಕ ಹಿಂದುಳಿದ ಉಪ್ಪಾರ, ದಲಿತ ಹಾಗೂ ಇನ್ನಿತರ ಸಮುದಾಯದವರು ವಾಸವಿರುವ ದೊಡ್ಡ ಗ್ರಾಮ. ಇಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಗ್ರಾಮ ಪಂಚಾಯಿತಿ, ಗ್ರಂಥಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಚೆ ಕಚೇರಿ, ಕೃಷಿ ಪತ್ತಿನ ಸಹಕಾರ ಸಂಘ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಿವೆ ಹಾಗಾಗಿ ಈ ಗ್ರಾಮಕ್ಕೆ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಹಿಂದೆಯೇ ಜಿಲ್ಲಾಧಿಕಾರಿ, ಅಬಕಾರಿ, ಸ್ಥಳೀಯ ಪಂಚಾಯಿತಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿ ಅನುಮತಿಯನ್ನು ನಿರಾಕರಿಸಲಾಗಿತ್ತು. ಆದರೆ ಇತ್ತೀಚೆಗೆ ಪಂಚಾಯಿತಿ ಪಿಡಿಓ ಮತ್ತು ಜನಪ್ರತಿನಿಧಿಗಳು ಹಣದ ಆಮಿಷಕ್ಕೆ ಒಳಗಾಗಿ ಗ್ರಾಮಸ್ಥರ ವಿರೋಧದ ನಡುವೆಯೇ ಏಕಾಏಕಿ ಊರಿನಲ್ಲಿ ಮದ್ಯದಂಗಡಿ ಬಾರ್ ತೆರೆಯಲು ಅನುಮತಿ ನೀಡಿದ್ದಾರೆ.  ಗ್ರಾಮದಲ್ಲಿ ಬಹುತೇಕ ಜನರು ಕೃಷಿ ಮತ್ತು ಕೂಲಿ ಕಾರ್ಮಿಕರಾಗಿದ್ದು, ಜೀವನೋಪಾಯಕ್ಕೆ ಬರುವ ಅಲ್ಪ ಆದಾಯವನ್ನೇ ನಂಬಿದ್ದಾರೆ. ಮದ್ಯದಂಗಡಿಯಿಂದ ಬಡ ಜನರ ಜೀವನ ಬೀದಿಗೆ ಬೀಳಲಿದೆ. ಆದ್ದರಿಂದ ಪಂಚಾಯಿತಿ ವತಿಯಿಂದ ನೀಡಿರುವ ಅನುಮತಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಮದ್ಯದಂಗಡಿ ತೆರೆಯದಂತೆ ಹಿಂದೆಯೇ ಗ್ರಾಮಸ್ಥರು  ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ದೂರು ನೀಡಲಾಗಿದೆ.  ಇದರ ನಡುವೆ ಕೆಲವರು ಸ್ವಾರ್ಥ ಸಾಧನೆಗಾಗಿ ಸಾವಿರಾರು ಎಕರೆ ಕೃಷಿ ಭೂಮಿ ನಡುವೆ ಬಾರ್ ಮತ್ತು ಲಾಡ್ಜ್ ತೆರೆಯಲು ಅನುಮತಿ ನೀಡಿದ್ದಾರೆ. ಆದ್ದರಿಂದ ಬಾರ್ ತೆರೆಯಲು ನೀಡಿರುವ ಅನುಮತಿಯನ್ನು ರದ್ದು ಪಡಿಸಬೇಕು ತಪ್ಪಿದ್ದಲ್ಲಿ ಮಹಿಳಾ ಸಂಘಟನೆಗಳ ಜೊತೆಗಡಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ  ಬಿಲ್ಲಹಳ್ಳಿ ಶಿವಕುಮಾರ್, ಮಹದೇವ್ ಸೌಮ್ಯ ಮಹದೇವ್, ಭಾರತ್ ಪರಿವರ್ತನಾ ಸಂಘದ ಅಧ್ಯಕ್ಷ ಆಯಿತನಹಳ್ಳಿ ಮಂಜು, ಪಿರಿಯಾಪಟ್ಟಣ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಚ್.ಸಿ.ವೀರಭದ್ರ, ಗ್ರಾಮದ ಮುಖಂಡರಾದ ಜಯಶಂಕರ್‌ ಮತ್ತಿತರರು ಉಪಸ್ಥಿತರಿದ್ದರು.

ಹಿಂದಿನ ಲೇಖನಆರ್‌ಎಸ್‌ಎಸ್‌ನಲ್ಲಿ ಉನ್ನತ ಪದಾಧಿಕಾರ ಯಾಕೆ ಒಂದು ಜಾತಿಗೆ ಸೀಮಿತವಾಗಿದೆ? ಸಿದ್ದರಾಮಯ್ಯ ಪ್ರಶ್ನೆ
ಮುಂದಿನ ಲೇಖನಮೈಸೂರಿಗೆ ಆಗಮಿಸಿದ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್‌ ಪಟೇಲ್