ಮನೆ ರಾಜ್ಯ ಆರ್‌ಎಸ್‌ಎಸ್‌ನಲ್ಲಿ ಉನ್ನತ ಪದಾಧಿಕಾರ ಯಾಕೆ ಒಂದು ಜಾತಿಗೆ ಸೀಮಿತವಾಗಿದೆ? ಸಿದ್ದರಾಮಯ್ಯ ಪ್ರಶ್ನೆ

ಆರ್‌ಎಸ್‌ಎಸ್‌ನಲ್ಲಿ ಉನ್ನತ ಪದಾಧಿಕಾರ ಯಾಕೆ ಒಂದು ಜಾತಿಗೆ ಸೀಮಿತವಾಗಿದೆ? ಸಿದ್ದರಾಮಯ್ಯ ಪ್ರಶ್ನೆ

0

ಬೆಂಗಳೂರು (Bengaluru)-ಹಿಂದುಗಳೆಲ್ಲ ಒಂದೇ ಎನ್ನುವ ಆರ್‌ಎಸ್‌ಎಸ್‌ನಲ್ಲಿ ಉನ್ನತ ಪದಾಧಿಕಾರ ಯಾಕೆ ಒಂದು ಜಾತಿಗೆ ಸೀಮಿತವಾಗಿದೆ? ಉಳಿದ ಜಾತಿಗಳು ಯಾಕೆ ಅಸ್ಪೃಶ್ಯವಾಗಿವೆ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪ್ರಶ್ನಿಸಿದ್ದಾರೆ.

ಈ ಕುರಿತು ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ನಿಮ್ಮ ಸಂಘದಲ್ಲಿ ಒಂದು ಜಾತಿಯ ಪದಾಧಿಕಾರಿಗಳು ಮಾತ್ರ ಯಾಕಿದ್ದಾರೆ ? ದಲಿತರು, ಹಿಂದುಳಿದವರು ಸೇರಿದಂತೆ ಬೇರೆ ಜಾತಿಗಳಿಗೆ ಯಾಕೆ ಅವಕಾಶ ಇಲ್ಲ? ಇಂತಹದೊಂದು ಸರಳ ಪ್ರಶ್ನೆಗೆ ಆರ್‌ಎಸ್‌ಎಸ್‌ನಲ್ಲಿ ಉತ್ತರ ಇಲ್ಲ ಎನ್ನುವುದೇ ಈ ಸಂಘಟನೆಯ ಡೋಂಗಿತನಕ್ಕೆ ಸಾಕ್ಷಿ ಎಂದು ಟೀಕಿಸಿದ್ದಾರೆ.

ನನ್ನ ಸರಳ ಪ್ರಶ್ನೆಗೆ ಉತ್ತರಿಸಲಾಗದ ಆರ್‌ಎಸ್‌ಎಸ್, ಬಿಜೆಪಿಯ ಕೂಗುಮಾರಿಗಳನ್ನು ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸಲು ಛೂ ಬಿಟ್ಟಿದೆ ಎಂದು ಆರೋಪಿಸಿರುವ ಅವರು, 97 ವರ್ಷಗಳ ಇತಿಹಾಸವಿರುವ ಆರ್‌ಎಸ್‌ಎಸ್ ನನ್ನದೊಂದು ಸರಳ ಪ್ರಶ್ನೆಗೆ ಉತ್ತರಿಸಲಾಗದಷ್ಟು ದುರ್ಬಲ ಸಂಘಟನೆಯೇ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯ ಒಬ್ಬ ನಾಯಕರು ಆರ್‌ಎಸ್‌ಎಸ್ ಶಾಖೆಗೆ ಬನ್ನಿ ಎಂದು ಕರೆಯುತ್ತಿದ್ದಾರೆ, ಇನ್ನೊಬ್ಬರು ಆರ್‌ಎಸ್‌ಎಸ್ ಪುಸ್ತಕ ಓದಿ ಎಂದು ಸಲಹೆ ನೀಡಿದ್ದಾರೆ. ಅಲ್ಲಿಗೆ ಹೋಗಿ, ಓದಿ ಏನನ್ನು ಕಲಿಯುವುದು? ಶೇ.40 ಕಮಿಷನ್ ಹೊಡೆಯುವುದಾ? ದುಡ್ಡು ಪಡೆದು ಪಕ್ಷಾಂತರ ಮಾಡುವುದಾ? ಎಂದು ತಿರುಗೇಟು ನೀಡಿದ್ದಾರೆ.

ನನ್ನ ಮೇಲೆ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ನಾಯಕರ ಮಾತುಗಳೇ, ಆರ್‌ಎಸ್‌ಎಸ್ ತನ್ನ ಸ್ವಯಂಸೇವಕರಿಗೆ ಕಲಿಸಿಕೊಡುವ ಸಂಸ್ಕಾರ-ಸಂಸ್ಕೃತಿ ಏನು ಎನ್ನುವುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್ ಶಾಖೆಗಳಿಗೆ ಹೋದರೆ ಏನಾಗುತ್ತದೆ ಎನ್ನುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರೇ ಜೀವಂತ ಉದಾಹರಣೆ. ಸಂಸ್ಕೃತಿ, ಸಂಸ್ಕಾರ, ಸಚ್ಛಾರಿತ್ರ್ಯದಂತಹ ಮೌಲ್ಯಗಳಿಗೂ, ನಿತ್ಯ ಶಬ್ದಭೇದಿ ಮಾಡುತ್ತಿರುವ ಕಟೀಲ್ ಅವರಿಗೂ ಏನಾದರೂ ಸಂಬಂಧವಿದೆಯೇ? ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೌರವಾನ್ವಿತ ನಾಯಕರಲ್ಲಿ ಮತ್ತೊಮ್ಮೆ ಮನವಿ ಮಾಡುತ್ತಿದ್ದೇನೆ. ಹಿಂದುಗಳೆಲ್ಲ ಒಂದು ಎನ್ನುವ ನಿಮ್ಮ ಸಂಘದ ಉನ್ನತ ಪದಾಧಿಕಾರ ಯಾಕೆ ಒಂದು ಜಾತಿಗೆ ಸೀಮಿತವಾಗಿದೆ? ಉಳಿದ ಜಾತಿಗಳು ಯಾಕೆ ಅಸ್ಪೃಶ್ಯವಾಗಿವೆ? ದಯವಿಟ್ಟು ಉತ್ತರಿಸಿ ಎಂದಿದ್ದಾರೆ.

ಹಿಂದಿನ ಲೇಖನʻಪಿಎಂ ಕೇರ್ಸ್ ಫಾರ್ ಚಿಲ್ಡ್ರನ್  ಯೋಜನೆʼಗೆ ಪ್ರಧಾನಿ ಮೋದಿ ಚಾಲನೆ
ಮುಂದಿನ ಲೇಖನಬಾರ್‌, ಲಾಡ್ಜ್‌ ತೆರೆಯದಂತೆ ಒತ್ತಾಯಿಸಿ ಪ್ರತಿಭಟನೆ