ಮನೆ ಅಪರಾಧ ಪ್ರವೇಶಾತಿ ಶುಲ್ಕ ಪಾವತಿ ಆದೇಶ ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ

ಪ್ರವೇಶಾತಿ ಶುಲ್ಕ ಪಾವತಿ ಆದೇಶ ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ

0

ಮೈಸೂರು(Mysuru): ಪ್ರವೇಶಾತಿ ಶುಲ್ಕ ಪಾವತಿ ಆದೇಶ ರದ್ದುಗೊಳಿಸುವಂತೆ ಆಗ್ರಹಿಸಿ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಗಳು ಬುಧವಾರ ಮಾನಸಗಂಗೋತ್ರಿಯ ಗಡಿಯಾರ ಗೋಪುರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯ ವಿಶ್ವವಿದ್ಯಾಲಯಗಳ ಸಂಶೋಧಕರ ಸಂಘದ ನೇತೃತ್ವದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾತಿ ನೀಡಿದ್ದರೂ ಇದೀಗ ಶುಲ್ಕ ಭರಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ ಎಂದು ದೂರಿದರು.

ಸಂಘದ ಅಧ್ಯಕ್ಷ ಮರಿದೇವಯ್ಯ ಮಾತನಾಡಿ, ವಿದ್ಯಾರ್ಥಿ ವೇತನದಲ್ಲಿ ಶುಲ್ಕವನ್ನು ಕಡಿತಗೊಳಿಸಬೇಕಿತ್ತು. ವೇತನವೇ ಇನ್ನೂ ಬಿಡುಗಡೆಯಾಗಿಲ್ಲ. ವಿಶ್ವವಿದ್ಯಾಲಯ ಮೇ 31ರೊಳಗೆ ಪ್ರವೇಶಾತಿ, ಪರೀಕ್ಷಾ ಶುಲ್ಕ ಕಟ್ಟುವಂತೆ ಆದೇಶ ಹೊರಡಿಸಿದೆ. ಅದರಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಶಿಷ್ಟ, ಹಿಂದುಳಿದ ಸಮು ದಾಯದ ವಿದ್ಯಾರ್ಥಿಗಳು ₹ 15 ಸಾವಿರ ದಿಂದ ₹ 20 ಸಾವಿರ ಶುಲ್ಕ ಭರಿಸಬೇಕಿದೆ. ವಿದ್ಯಾರ್ಥಿ ವೇತನ ನೀಡಿದಾಗಲೇ ಶುಲ್ಕ ಕಡಿತಗೊಳಿಸಿಕೊಳ್ಳಲಿ ‍ ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ , ಈ ಸಂಬಂಧ ಸಭೆ ಕರೆದು ಗೊಂದಲ ಬಗೆಹರಿಸಲಾಗುವುದು. ಜೂನ್‌ 3ರೊಳಗೆ ಕ್ರಮ ಕೈಗೊಳ್ಳಲಾಗುವುದು  ಎಂದು ಭರವಸೆ ನೀಡಿದರು.

ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.ವಿಶ್ವವಿದ್ಯಾಲಯ ಸಂಶೋಧಕರ ಸಂಘದ ಅಧ್ಯಕ್ಷ ಶಶಿಕುಮಾರ್, ಸಂಶೋಧಕರಾದ ಕೆಂಪರಾಜು, ದಿಲೀಪ್‌, ಗೌತಮ್‌, ಶ್ರೀನಿವಾಸ, ಕಾರ್ತಿಕ್, ಕಿರಣ್ ಕುಮಾರ್, ಮಹೇಶ್ ಬನ್ನವಾಡಿ, ಗಣೇಶ್, ಕೃತಿಕಾ, ದೀಪಿಕಾ, ದಿವ್ಯಶ್ರೀ, ಅಭಿಷೇಕ್, ಮೇಘನಾ, ದರ್ಶನ್, ನಂಜುಂಡಸ್ವಾಮಿ, ಪ್ರವೀಣ್ ಕುಮಾರ್ ಇದ್ದರು.