ಮನೆ ಸುದ್ದಿ ಜಾಲ ಕೇಸರಿ ಬಣ್ಣ ಬಳಿಯುವ ಸರ್ಕಾರಿ ಶಾಲೆಗಳ ಮುಂದೆ ಪ್ರತಿಭಟನೆ: ಬಿ.ಟಿ. ಲಲಿತಾ ನಾಯ್ಕ ಎಚ್ಚರಿಕೆ

ಕೇಸರಿ ಬಣ್ಣ ಬಳಿಯುವ ಸರ್ಕಾರಿ ಶಾಲೆಗಳ ಮುಂದೆ ಪ್ರತಿಭಟನೆ: ಬಿ.ಟಿ. ಲಲಿತಾ ನಾಯ್ಕ ಎಚ್ಚರಿಕೆ

0

ಹೊಸಪೇಟೆ: ವಿವೇಕಾನಂದರ ಹೆಸರಿನಲ್ಲಿ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವ ಸರ್ಕಾರದ ನಿರ್ಧಾರ ಸರಿಯಲ್ಲ. ವಿವೇಕ ಹೆಸರಿನಲ್ಲಿ ಸರ್ಕಾರಿ ಶಾಲೆಗಳ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿದರೆ ಅಂಥ ಶಾಲೆಗಳೆದುರು ಪಕ್ಷದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವೆ, ಜನತಾ ಪಾರ್ಟಿ ರಾಜ್ಯ ಘಟಕದ ಅಧ್ಯಕ್ಷೆ ಬಿ.ಟಿ. ಲಲಿತಾ ನಾಯ್ಕ ಎಚ್ಚರಿಕೆ ನೀಡಿದರು.

ಸೋಮವಾರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಯಾವುದೇ ಬಣ್ಣದ ವಿರೋಧಿಯಲ್ಲ. ಶಾಲಾ ಕಟ್ಟಡಕ್ಕೆ ಎಂಥ ಬಣ್ಣ ಬಳಿಯಬೇಕು ಎನ್ನುವುದರ ಬದಲು ಅಲ್ಲಿ ಮೂಲಸೌಕರ್ಯ, ಗುಣಮಟ್ಟದ ಶಿಕ್ಷಣ ಕಲ್ಪಿಸಲು ಹೆಚ್ಚಿನ ಒತ್ತು ಕೊಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಸಂಪೂರ್ಣವಾಗಿ ಮಠಗಳು, ಆರ್‌ಎಸ್‌ಎಸ್‌ ನಿಯಂತ್ರಣದಲ್ಲಿದೆ. ಧರ್ಮದ ಹೆಸರಿನಲ್ಲಿ ದೇಶ ಹಾಳು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ನಂತರ ಜಮೀನು ಕಬಳಿಸುವುದು, ಜಾಮೀನಿನ ಮೇಲೆ ಹೊರಬರುವುದು ಸಾಮಾನ್ಯ ವಿಷಯವಾಗಿದೆ ಎಂದು ಟೀಕಿಸಿದರು.

ಬೆಲೆ ಏರಿಕೆ, ಭ್ರಷ್ಟಾಚಾರ ಮಿತಿ ಮೀರಿದೆ. ರಾಜಕೀಯ ಪಕ್ಷಗಳಲ್ಲಿ ಮೌಲ್ಯ ಕುಸಿದಿದೆ. ಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ನಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ವಿಜಯನಗರ–ಬಳ್ಳಾರಿ ಜಿಲ್ಲೆಯಲ್ಲೂ ಅನೇಕರು ಆಕಾಂಕ್ಷಿಗಳಿದ್ದಾರೆ. ಬರುವ ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.

ವಿಜಯನಗರ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿ ಸಕಾಲಕ್ಕೆ ಜನಸಾಮಾನ್ಯರ ಕೆಲಸಗಳಾಗುತ್ತಿಲ್ಲ. ಖಾತೆ ಬದಲಾವಣೆ, ಫಾರಂ ನಂಬರ್‌ 3 ಕೆಲಸಗಳು ಸುಲಭವಾಗಿ ಆಗುವುದಿಲ್ಲ. ಹೆಚ್ಚಿನ ಪ್ರವಾಸಿಗರು ಜಿಲ್ಲೆಗೆ ಬಂದು ಹೋಗುವುದರಿಂದ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದು ಆಗ್ರಹಿಸಿದರು.

ಹೊಸಪೇಟೆಯ ಡಾ. ಪುನೀತ್‌ ರಾಜಕುಮಾರ್‌ ಜಿಲ್ಲಾ ಕ್ರೀಡಾಂಗಣದ ಮಧ್ಯ ಭಾಗದಲ್ಲಿ 405 ಅಡಿ ಎತ್ತರದ ಧ್ವಜ ಸ್ತಂಭ ನಿರ್ಮಿಸಿದ್ದು ಅತ್ಯಂತ ಅವೈಜ್ಞಾನಿಕವಾಗಿದೆ. ಮಧ್ಯಭಾಗದಲ್ಲಿ ಧ್ವಜ ಸ್ತಂಭ ಸ್ಥಾಪಿಸಿರುವುದರಿಂದ ಕ್ರೀಡೆಗಳನ್ನು ಸಂಘಟಿಸಲು ತೊಂದರೆ ಆಗುತ್ತಿದೆ. ಡಿಸೆಂಬರ್‌ ಒಳಗೆ ಅದನ್ನು ತೆರವುಗೊಳಿಸಬೇಕು. ಇಲ್ಲವಾದರೆ ಅದರ ವಿರುದ್ಧ ಹೋರಾಟ ನಡೆಸಲಾಗುವುದು ಗಡುವು ನೀಡಿದರು.