ಮನೆ ಸುದ್ದಿ ಜಾಲ ಕೋವಿಡ್ ಕಾಲದಲ್ಲಿ ವೈದ್ಯರು, ವಿಜ್ಞಾನಿಗಳೇ ದೇವರಾದರು: ಪ್ರೊ.ಎಸ್.ಅಯ್ಯಪ್ಪನ್

ಕೋವಿಡ್ ಕಾಲದಲ್ಲಿ ವೈದ್ಯರು, ವಿಜ್ಞಾನಿಗಳೇ ದೇವರಾದರು: ಪ್ರೊ.ಎಸ್.ಅಯ್ಯಪ್ಪನ್

0

ಮೈಸೂರು:  ಕೋವಿಡ್‌ ಕಾಲದಲ್ಲಿ ಜನರಿಗೆ ವೈದ್ಯರು, ವಿಜ್ಞಾನಿಗಳೇ ನಿಜವಾದ ದೇವರಾದರು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಎಸ್.ಅಯ್ಯಪ್ಪನ್ ತಿಳಿಸಿದರು.

ಮಾನಸ ಗಂಗೋತ್ರಿಯ ಅಣು ಜೀವಶಾಸ್ತ್ರ ಹಾಗೂ ಸಾವಯವ ರಾಸಾಯನ ಶಾಸ್ತ್ರ  ವಿಭಾಗದ ವತಿಯಿಂದ ವಿಜ್ಞಾನ ಭವನದಲ್ಲಿ ‘ಟ್ರೆಂಡ್ಸ್ ಇನ್ ಡ್ರಗ್ ಡಿಸ್ಕೋವರಿ’ ವಿಷಯದ ಕುರಿತು ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಮನುಷ್ಯ ಇದುವರೆಗೆ ದೇವರನ್ನ ನೋಡಿಲ್ಲ. ಅವನು ಎಲ್ಲಿದ್ದಾನೆ ಎಂಬುದು ಗೊತ್ತಿಲ್ಲ. ಆದರೂ ಅನುದಿನವೂ ಅವರಿಗೆ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡುತ್ತಾನೆ. ಆದರೆ, ಜಗತ್ತಿಗೆ ಕೋವಿಡ್ ಕಾಡತೊಡಗಿದಾಗ ಮನುಷ್ಯನಿಗೆ ವೈದ್ಯರು ದೇವರಾದರು. ವಿಜ್ಞಾನಿಗಳು ಲಸಿಕೆ ಕಂಡು ಹಿಡಿದು ಜನರ ಜೀವ ರಕ್ಷಣೆ ಮಾಡಿದರು ಎಂದು ಹೇಳಿದರು.

ಕೋವಿಡ್ ನಂತರ ಸಂಬಂಧಗಳಿಗೆ ಹೆಚ್ಚು ಅರ್ಥ ಸಿಕ್ಕಿತು. ಆರೋಗ್ಯದ ಬಗ್ಗೆ ಕಾಳಜಿಯೂ ಹೆಚ್ಚಾಯಿತು. ನಾವು ಕೇಳದ ಹಲವು ಪದಗಳು ನಮ್ಮ ಬದುಕಿನ ಭಾಗವೇ ಆಗಿ ಹೋದವು. ಸೇವಿಸುವ ಆಹಾರದಲ್ಲೂ ಬದಲಾವಣೆಗಳಾದವು. ದೇಹ ದಂಡನೆಗೆ ಹೆಚ್ಚು ಒತ್ತು ನೀಡಿದೆವು. ಹೊಸದೊಂದು ಆಲೋಚನೆ ಮೂಲಕ ಜೀವನ ಶುರು ಮಾಡಿದೆವು ಎಂದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಅಪರೂಪದ ರೋಗದಿಂದ ಬಳಲುತ್ತಿರುವ ರೋಗಿಗಳ ಜೀವನ ಮಟ್ಟ ಸುಧಾರಿಸಲು ರಸಾಯನಶಾಸ್ತ್ರಜ್ಞ/ಜೀವಶಾಸ್ತ್ರಜ್ಞ/ಕಂಪ್ಯೂಟರ್ ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ರೋಗಿಗಳಿಗೆ ಬೇಕಾದ ಆರೈಕೆ ಹಾಗೂ ಸಂಶೋಧನೆ ನಡೆಸುತ್ತಿದ್ದಾರೆ. ತಂತ್ರಜ್ಞಾನದ ಮೂಲಕ ರೋಗವನ್ನು ಸೋಲಿಸಲು ಹೋರಾಡುತ್ತಿದ್ದಾರೆ ಎಂದು ತಿಳಿಸಿದರು.

ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಉದ್ಘಾಟಿಸಿದರು. ಆಲ್ ಇಂಡಿಯಾ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಪ್ರೊ.ತೇಜ್ ಪಾಲ್ ಸಿಂಗ್, ಜವಾಹರ್‌ಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಡ್ ಸೈಂಟಿಫಿಕ್ ರಿಸರ್ಚ್ ನ ಡಾ.ತಪಸ ಕೆ. ಕುಂಡು ಸೇರಿದಂತೆ ಇತರರು ಇದ್ದರು.

ಹಿಂದಿನ ಲೇಖನರಾಜ್ಯದಲ್ಲಿ 12 ವರ್ಷದಲ್ಲಿ 8,207 ರೈತರ ಆತ್ಮಹತ್ಯೆ ಪ್ರಕರಣ ವರದಿ
ಮುಂದಿನ ಲೇಖನತರಬೇತಿ ವಿಮಾನ ಪತನ: ಪೈಲಟ್, ಟ್ರೈನಿ ಪೈಲಟ್ ದುರ್ಮರಣ