ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನೇಮಕಾತಿ ಹಗರಣದ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯವು ಮಂಗಳವಾರ ತಿರಸ್ಕರಿಸಿದೆ.
ಪಿಎಸ್ಐ ಹುದ್ದೆಯ ಆಕಾಂಕ್ಷಿಗಳಾದ ಎಸ್ ಜಾಗೃತ್, ಆರ್ ಮಧು, ಮಧ್ಯವರ್ತಿಗಳಾದ ಸಿ ಎನ್ ಶಶಿಧರ ಮತ್ತು ಶರತ್ ಕುಮಾರ್ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿ ನ್ಯಾಯಾಧೀಶ ಆನಂದ ಟಿ.ಚೌಹಾಣ್ ಮಂಗಳವಾರ ಆದೇಶಿಸಿದರು.
ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ ಅವರು “55 ಸಾವಿರ ಅಭ್ಯರ್ಥಿಗಳಿಗೆ ಅನ್ಯಾಯ ಎಸಗಿದ ಆರೋಪ ಇದಾಗಿದೆ. ಪೊಲೀಸ್ ಇಲಾಖೆಯಲ್ಲೇ ಈ ರೀತಿ ನಡೆದರೆ ನಾಳೆ ಇಂತಹವರು ಹುದ್ದೆಗಳನ್ನು ಅಲಂಕರಿಸಿದ ಮೇಲೆ ಭ್ರಷ್ಟಾಚಾರಕ್ಕೆ ಇಳಿಯುತ್ತಾರೆ. ಅಷ್ಟೇ ಅಲ್ಲ ತನಿಖೆಯೂ ಬಾಕಿ ಇದೆ. ಹೀಗಾಗಿ, ಜಾಮೀನು ನೀಡಬಾರದು” ಎಂದು ಮನವಿ ಮಾಡಿದ್ದರು.
“ಜಾಮೀನು ಕೋರಿದ ಆರೋಪಿಗಳಲ್ಲಿ ಇಬ್ಬರು ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆಯ 100 ಅಂಕಗಳಲ್ಲಿ 19 ಅಂಕಗಳ ಪ್ರಶ್ನೆಗಳಿಗೆ ಉತ್ತರಿಸಿದ್ದರು. ನಂತರ ಇವುಗಳನ್ನು 99 ಎಂದು ತಿದ್ದಿದ್ದರು” ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ಜಾಮೀನು ಕೋರಿದ ಮತ್ತಿಬ್ಬರು ಆರೋಪಿಗಳಾದ ಸಿ ಎನ್ ಶಶಿಧರ ಚನ್ನರಾಯಪಟ್ಟಣ ಪುರಸಭೆ ಸದಸ್ಯರಾಗಿದ್ದರೆ. ಆರ್ ಶರತ್ ಕುಮಾರ್ ನಾಗಮಂಗಲದಲ್ಲಿ ಚಿಟ್ಫಂಡ್ ಫೈನಾನ್ಸ್ ನಡೆಸುತ್ತಿದ್ದರು.














