ಮನೆ ರಾಜ್ಯ ಪಿಎಸ್‌ಐ ಅಕ್ರಮ: ಮೊದಲ ರ್ಯಾಂಕ್‌ ಪಡೆದಿದ್ದ ಜೆಡಿಎಸ್‌ ಮುಖಂಡನ ಪುತ್ರ ಕುಶಾಲ್‌ ಕುಮಾರ್‌ ಸಿಐಡಿ ವಶಕ್ಕೆ

ಪಿಎಸ್‌ಐ ಅಕ್ರಮ: ಮೊದಲ ರ್ಯಾಂಕ್‌ ಪಡೆದಿದ್ದ ಜೆಡಿಎಸ್‌ ಮುಖಂಡನ ಪುತ್ರ ಕುಶಾಲ್‌ ಕುಮಾರ್‌ ಸಿಐಡಿ ವಶಕ್ಕೆ

0

ಬೆಂಗಳೂರು (Bengaluru):  ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ ಅಭ್ಯರ್ಥಿ ಜೆ.ಕುಶಾಲ್‌ಕುಮಾರ್ ಅವರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಜೆಡಿಎಸ್‌ ಮುಖಂಡ ಜುಟ್ಟನಹಳ್ಳಿ ಜಯರಾಮಯ್ಯ ಅವರ ಪುತ್ರ ಕುಶಾಲ್‌ಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಜೊತೆಗೆ ಪ್ರಕರಣದಲ್ಲಿ ತಂದೆ ಪಾತ್ರದ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.

ಕುಶಾಲ್‌ ಕುಮಾರ್‌ ಒಎಂಆರ್ ಪ್ರತಿ ತಿದ್ದಿಸಿ ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ಇತರೆ ಪುರಾವೆ ಆಧರಿಸಿ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಐಡಿ ಮೂಲಗಳು ಹೇಳಿವೆ.

ಎಂಜಿನಿಯರಿಂಗ್ ಪದವೀಧರ ಕುಶಾಲ್, ಹಲಸೂರು ಗೇಟ್ ಠಾಣೆ ವ್ಯಾಪ್ತಿಯ ಕೇಂದ್ರವೊಂದರಲ್ಲಿ ಪರೀಕ್ಷೆ ಬರೆದಿದ್ದ. ಆತನ ಆಪ್ತರೊಬ್ಬರು, ಪೊಲೀಸ್ ನೇಮಕಾತಿ ವಿಭಾಗದ ನೌಕರರ ಜೊತೆ ಮಾತುಕತೆ ನಡೆಸಿ ಒಎಂಆರ್ ಪ್ರತಿ ತಿದ್ದಲು ಒಪ್ಪಿಸಿದ್ದರು. ಅದಕ್ಕಾಗಿ 80 ಲಕ್ಷ ರೂ. ನೀಡಿರುವ ಮಾಹಿತಿಯೂ ಇದೆ. ಈ ಬಗ್ಗೆ ಅಭ್ಯರ್ಥಿಯಿಂದ ಮಾಹಿತಿ ಕಲೆಹಾಕಬೇಕಿದೆ ಎಂದೂ ತಿಳಿಸಿವೆ.

ಪತ್ರಿಕೆ–1ರಲ್ಲಿ (ಪ್ರಬಂಧ, ಭಾಷಾಂತರ, ಸಾರಾಂಶ ಬರಹ) 30.5 ಅಂಕ ಹಾಗೂ ಪತ್ರಿಕೆ–2ರಲ್ಲಿ (ಸಾಮಾನ್ಯ ಅಧ್ಯಯನ) 137.25 ಅಂಕ ಪಡೆದಿದ್ದ. ಒಟ್ಟು 167.75 ಅಂಕಗಳೊಂದಿಗೆ ಮೊದಲ ರ‍್ಯಾಂಕ್ ಪಡೆದಿದ್ದ. ಪತ್ರಿಕೆ–1ರಲ್ಲೂ ಆರೋಪಿ ಅಕ್ರಮ ಎಸಗಿರುವ ಅನುಮಾನವಿದೆ ಎಂದೂ ಹೇಳಿವೆ.

ಹಿಂದಿನ ಲೇಖನಗಾಯಕ ಸಿಧು ಮೂಸವಾಲ ಹತ್ಯೆ ಪ್ರಕರಣ: ಗೋಲ್ಡೀ ಬ್ರಾರ್‌ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಜಾರಿ
ಮುಂದಿನ ಲೇಖನಇಂದು ರಾಜ್ಯಸಭೆಯ 16 ಸ್ಥಾನಗಳಿಗೆ ಮತದಾನ