ಹಾಸನ (Hassan)-ಪಿಎಸ್‌ಐ ನೇಮಕಾತಿಯ ಅಕ್ರಮದ ಕಿಂಗ್‌ಪಿನ್ ಹೆಸರು ಬಹಿರಂಗವಾದರೆ ಸರ್ಕಾರ ಪತನವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಹೊಸ ಬಾಂಬ್ ಸಿಡಿಸಿದ್ದಾರೆ.
ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗರಣದ ಕಿಂಗ್‌ಪಿನ್ ಹೆಸರು ಹೇಳಲು ಸಾಧ್ಯನಾ ? ಕಿಂಗ್‌ಪಿನ್ ಹೆಸರು ಹೇಳಿದರೆ ರಾಜ್ಯ ಸರ್ಕಾರವೇ ಬಿದ್ದುಹೋಗುತ್ತದೆ. ಹಾಗಾಗಿಯೇ ಯಾರು ಕೂಡ ಆ ಬಗ್ಗೆ ಮಾತನಾಡುತ್ತಿಲ್ಲ. ಅಲ್ಲಿನ ಭವಿಷ್ಯತ್ ನಾಯಕನ ಬಗ್ಗೆ ಮಾತನಾಡುವ ಧೈರ್ಯ ಯಾರಿಗೂ ಇಲ್ಲ ಎಂದು ಕುಟುಕಿದರು.
ನೇಮಕಾತಿಗಳಲ್ಲಿ ಅಕ್ರಮ ಸರಮಾಲೆಯೇ ಹೊರಬರುತ್ತಿದೆ. ಮಂತ್ರಿಗಳ ಮೇಲೆಯೇ ಆಪಾದನೆ ಬರುತ್ತಿದೆ. ಮಾಗಡಿಯಲ್ಲಿ ಇಬ್ಬರು ಪಿಎಸ್ ಐ ಹುದ್ದೆಗೆ ಆಯ್ಕೆ ಆಗಿರುವುದಕ್ಕೆ 80 ಲಕ್ಷ ರೂಪಾಯಿ ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್‌ನವರು ಆರೋಪ ಮಾಡಿದ್ದಾರೆ. ಇದರ ಹಿಂದೆ ಯಾರಿದ್ದಾರೆ? ಹಾಗೆಯೇ ಶಿಕ್ಷಣ ಇಲಾಖೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಯಾರ ಕೈವಾಡ ಇದೆ? ಸಹ ಪ್ರಾಧ್ಯಾಪಕರ ಹುದ್ದೆಗೆ ಕೂಡ 80 ಲಕ್ಷ ರೂಪಾಯಿ ರೇಟ್ ಫಿಕ್ಸ್ ಮಾಡಿದ್ದಾರೆ. ಇದು ಪಿಎಸ್‌ಐ ಹಗರಣಕ್ಕಿಂತ ದೊಡ್ಡ ಹಗರಣ ಎಂದರು.