ಮನೆ ರಾಜ್ಯ ಪಿಎಸ್‌ ಐ ಹಗರಣ: ಡಿವೈ‌ಎಸ್‌ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಆನಂದ್ ಮೇತ್ರೆ ಬಂಧನ

ಪಿಎಸ್‌ ಐ ಹಗರಣ: ಡಿವೈ‌ಎಸ್‌ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಆನಂದ್ ಮೇತ್ರೆ ಬಂಧನ

0

ಕಲಬುರಗಿ (Kalaburagi)- ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಇಬ್ಬರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ರಾಯಚೂರು ಜಿಲ್ಲೆಯ ಲಿಂಗಸೂಗೂರು ಡಿವೈ‌ಎಸ್‌ಪಿ ಮಲ್ಲಿಕಾರ್ಜುನ ಸಾಲಿ ಹಾಗೂ ಕಲಬುರಗಿ ಬೆರಳಚ್ಚು ವಿಭಾಗದ ಸಿಪಿಐ ಆನಂದ್ ಮೇತ್ರೆ ಅವರನ್ನು ಗುರುವಾರ ಬಂಧಿಸಲಾಗಿದೆ. ಸಾಲಿ ಮತ್ತು ಮೈತ್ರೆ ಬಂಧನದೊಂದಿಗೆ ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿಯಿಂದ ಬಂಧಿತರ ಸಂಖ್ಯೆ 31 ಕ್ಕೆ ಏರಿಕೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ನಿನ್ನೆಯಿಂದ ಸುಮಾರು 10 ಗಂಟೆಗಳ ಸುದೀರ್ಘ ವಿಚಾರಣೆ ನಡೆಸಿದ ಸಿಐಡಿ ತಂಡ, ಇಂದು ಇಬ್ಬರನ್ನು ಬಂಧಿಸಿದೆ. ವೈದ್ಯಕೀಯ ತಪಾಸಣೆ ನಂತರ ಆರೋಪಿ ಅಧಿಕಾರಿಗಳನ್ನು ಸಿಐಡಿ ಪೊಲೀಸರು 3ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಮಲ್ಲಿಕಾರ್ಜುನ ಸಾಲಿ ಮತ್ತು ಆನಂದ್ ಮೈತ್ರೆ ಇಬ್ಬರನ್ನೂ 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ, ಡಿವೈಎಸ್‌ಪಿ ರ್ಯಾಂಕ್ ಅಧಿಕಾರಿಯನ್ನು ಬಂಧಿಸಿರುವುದು ಇದೇ ಮೊದಲು. ಈಗಾಗಲೇ 7 ದಿನಗಳಿಂದ ಸಿಐಡಿ ಕಸ್ಟಡಿಯಲ್ಲಿರುವ ಹಗರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್‌ಗೆ ಸಹಾಯ ಮಾಡಿದ ಆರೋಪದ ಮೇಲೆ ಸಾಲಿ ಅವರನ್ನು ಬಂಧಿಸಲಾಗಿದೆ. ಆರ್ ಡಿ ಪಾಟೀಲ್ ಅವರು ಬ್ಲೂಟೂತ್ ಸಾಧನವನ್ನು ಬಳಸಿಕೊಂಡು ಅಭ್ಯರ್ಥಿಗಳಿಗೆ ಪಿಎಸ್ಐ ಪರೀಕ್ಷೆ ಬರೆಯಲು ಸಹಾಯ ಮಾಡಿದ ಆರೋಪ ಎದುರಿಸುತ್ತಿದ್ದಾರೆ.

ಇನ್ನೂ ಡಿವೈಎಸ್ ಪಿ ಬಂಧನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಾಯಚೂರು ಎಸ್ ಪಿ ಬಿ.ನಿಖಿಲ್  ಅವರು, ಸಿಐಡಿಯಿಂದ ಮಲ್ಲಿಕಾರ್ಜುನ ಸಾಲಿ ಬಂಧನದ ಬಗ್ಗೆ ವರದಿ ಕೇಳುವುದಾಗಿ ಮತ್ತು ಅದನ್ನು ಪೊಲೀಸ್ ಮಹಾನಿರ್ದೇಶಕರಿಗೆ ರವಾನಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಸಿಐಡಿ ಸಹ ನೇರವಾಗಿ ಡಿಜಿಪಿಗೆ ವರದಿ ಕಳುಹಿಸಲಿದೆ ಎಂದು ಅವರು ಹೇಳಿದ್ದಾರೆ.

ಹಿಂದಿನ ಲೇಖನಆರೋಪಿಸುವವರು ಮಾಹಿತಿ ಕೊಟ್ಟರೆ ತನಿಖೆ ಸಮರ್ಪಕವಾಗಿ ನಡೆಯಲಿದೆ: ಎಸ್.ಟಿ.ಸೋಮಶೇಖರ್‌
ಮುಂದಿನ ಲೇಖನಮರಾಠಾ ಸಮುದಾಯದಕ್ಕೆ ಸಚಿವ ಸ್ಥಾನ ಕೊಡಬೇಕು, ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ: ರಮೇಶ್‌ ಜಾರಕಿಹೊಳಿ