ಮನೆ ಸುದ್ದಿ ಜಾಲ ಇಂದು ಕಿರುರಂಗಮಂದಿರದಲ್ಲಿ `ತುಘಲಕ್’ ನಾಟಕ ಪ್ರದರ್ಶನ

ಇಂದು ಕಿರುರಂಗಮಂದಿರದಲ್ಲಿ `ತುಘಲಕ್’ ನಾಟಕ ಪ್ರದರ್ಶನ

0

ಮೈಸೂರು (Mysuru)- ಮೈಸೂರಿನ ಕಲಾಮಂದಿರದಲ್ಲಿರುವ ಕಿರುರಂಗಮಂದಿರದಲ್ಲಿ ಇಂದು ಸಂಜೆ 6.30ಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ ಕಾರ್ನಾಡರ ಶ್ರೇಷ್ಠ ನಾಟಕ `ತುಘಲಕ್’ ಪ್ರದರ್ಶನಗೊಳ್ಳಲಿದೆ.

ರಂಗಾಯಣದ ಹಿರಿಯ ಕಲಾವಿದ ಶ್ರೀ ಮಾಯಸಂದ್ರ ಕೃಷ್ಣಪ್ರಸಾದ್ ಈ ನಾಟಕವನ್ನು ನಿರ್ದೇಶಿಸಿರುತ್ತಾರೆ. ಮಂಜುನಾಥಶಾಸ್ತ್ರಿ, ರವಿಪ್ರಸಾದ್, ಮುರಳಿ ಗುಂಡಣ್ಣ, ರಶ್ಮಿ ನಾರಾಯಣ್, ಹರಿಪ್ರಸಾದ್, ರಾಘವೇಂದ್ರ ಬೂದನೂರು, ಮಂಜು ವಿ. ನರಸಾಪುರ, ವಿಜಯ್, ಪ್ರಣವ ಸ್ವರೂಪ್, ರಘು, ಶಿವಮೂರ್ತಿ, ಮಂಜು ಆರ್., ಗುರುರಾಜ್, ಭಾರ್ಗವಿ, ಆದರ್ಶ, ನವೀನ್, ಪ್ರಜ್ವಲ್, ರಕ್ಷಿತ್, ಹೊಯ್ಸಳ ಎನ್, ಧನುಷ್, ಗೌತಮ್, ಸಂಜಯ್ ರಂಗದ ಮೇಲೆ ಅಭಿನಯಿಸಲಿದ್ದಾರೆ.

ನೇಪಥ್ಯದಲ್ಲಿ:

ಬೆಳಕು – ಕೃಷ್ಣಕುಮಾರ್ ನಾರ್ಣಕಜೆ, ವಸ್ತ್ರವಿನ್ಯಾಸ – ಬಿ.ಎಂ. ರಾಮಚಂದ್ರ, ಸಂಗೀತ – ಉದಿತ್ ಹರಿತಸ್, ರಂಗಸಜ್ಜಿಕೆ ಮತ್ತು ಪರಿಕರ – ಮಂಜು ಕಾಚಕ್ಕಿ, ಸಹ ನಿರ್ದೇಶನ – ಹರಿಪ್ರಸಾದ್ ಕಶ್ಯಪ್, ನಿರ್ವಹಣೆ – ಮಂಜುನಾಥಶಾಸ್ತ್ರಿ.

ನಾಟಕ ಕುರಿತು:

ಕೇವಲ ಕಾಮಾತುರನಾಗಿ ಒಬ್ಬ ಹೆಣ್ಣನ್ನು ಎಳೆದಾಡಿದರೆ ಏನು ಪ್ರಯೋಜನ? ಇಲ್ಲ.. ಇಲ್ಲ.. ಮೊದಲು ಅಧಿಕಾರ ಪಡೆಯಬೇಕು. ಆಗ ಪೀಡೆ, ಕ್ರೀಡೆ ಎಲ್ಲದಕ್ಕೂ ಅರ್ಥ ಬಂದುಬಿಡುತ್ತದೆ..

ಧರ್ಮಕ್ಕೂ ರಾಜಕಾರಣಕ್ಕೂ ಏನು ಸಂಬಂಧ? ಜೀವನದಲ್ಲಿ ಒಮ್ಮೊಮ್ಮೆ ಹೆಡೆಯೆತ್ತುವ ಶೂನ್ಯತೆಗೆ ಭಕ್ತಿಯ ಹೊರತು ಬೇರೆ ಯಾವ ಸಂಗೀತ ಬಗ್ಗಿಸೀತು? ಅಲ್ಲಿ ಧರ್ಮವೊಂದೇ ಬೆಳಕು. ಆದರೆ ನನ್ನ ರಾಜ್ಯದಲ್ಲಿ ಲಕ್ಷಾವಧಿ ಜನರಿದ್ದಾರೆ. ಅಲ್ಲಿಯೂ ಕೊಳೆ ಇದೆ, ನಿಜ. ಆದರೆ ಮನುಷ್ಯರು ಮಾಡಿಟ್ಟ ಕೊಳೆಯನ್ನು ತೊಳೆಯಲಿಕ್ಕೆ ನಾನು ದೇವರನ್ನು ಏಕೆ ಕರೆಯಬೇಕು?

ಮೊಣಕಾಲ ಮೇಲೆ ಬಹಳ ದೂರ ತಲುಪುವುದು ಯಾರಿಗೂ ಸಾಧ್ಯವಿಲ್ಲ, ಶೇಖಸಾಹೇೀಬ. ನನಗೆ ಬೇಕಾದದ್ದು ಅಂಬೆಗಾಲಿಕ್ಕುವುದಲ್ಲ, ನಾಗಾಲೋಟ.

ಕ್ರಿ.ಶ. 1327ರಲ್ಲಿ ದಿಲ್ಲಿಯಲ್ಲಿ ನಡೆಯುವ ಘಟನೆಗಳನ್ನು ಆಧರಿಸಿ ಮನುಷ್ಯನ ಸಾರ್ವಕಾಲಿಕ ಅನುಭವಕ್ಕೆ ರೂಪಕವಾಗಿ ಕಾರ್ನಾಡರು ಕಟ್ಟಿಕೊಟ್ಟಿರುವ `ತುಘಲಕ್’ ನಾಟಕದಲ್ಲಿನ ಪಾತ್ರಗಳು ಆಡುವ ಮಾತುಗಳಿವು.  ಈ ಮಾತುಗಳು ಐತಿಹಾಸಿಕ ಸಂದರ್ಭದಲ್ಲಿ ಮೂಡಿಬಂದಿದ್ದರೂ ಸಮಕಾಲೀನ ರಾಜಕೀಯದ ಸಂದರ್ಭಕ್ಕೆ ಕೆಲವೊಮ್ಮೆ ಹೊಂದಿಬಿಡುವ ಆಕಸ್ಮಿಕವೇ ಸಾಹಿತ್ಯದ ಸಾರ್ವಕಾಲಿಕ ಶಕ್ತಿಯಾಗಿದೆ.

ತನ್ನ ಆದರ್ಶಗಳನ್ನು ಸಾಕಾರಗೊಳಿಸಲು ಹಲವಾರು ಬದಲಾವಣೆಗಳನ್ನು ತರಲು ಪ್ರಯತ್ನಿಸುವ ಮಹಮದ್ ಬಿನ್ ತುಘಲಕ್, ಆರ್ಥಿಕ ಉಪಯೋಗಕ್ಕಾಗಿ ಬೆಳ್ಳಿ ನಾಣ್ಯದ ಬದಲಿಗೆ ತಾಮ್ರದ ನಾಣ್ಯ ಚಲಾವಣೆ, ರಾಜ್ಯಾಡಳಿತದ ಅನುಕೂಲಕ್ಕಾಗಿ ರಾಜಧಾನಿಯ ಬದಲಾವಣೆ, ಜೂಜಿಗೆ ಹೆಚ್ಚು ತೆರಿಗೆ ವಿಧಿಸಿ ಶಾಲೆ-ಆಸ್ಪತ್ರೆಗಳ ಸ್ಥಾಪನೆ ಹೀಗೆ ಹಲವಾರು ಕ್ರಾಂತಿಕಾರಿ ಪರಿವರ್ತನೆಗಳಿಗೆ ಆದೇಶಿಸುತ್ತಾನೆ. ತನ್ನ ಉದ್ದೇಶವನ್ನು ವಿರೋಧಿಸಿದ ಆಂತರಿಕ ಹಾಗೂ ಬಾಹ್ಯ ಶತ್ರುಗಳನ್ನು ನಾಶಗೊಳಿಸುತ್ತಾನೆ. ಇದನ್ನು ಸಹಿಸದ ಧರ್ಮಾಂಧರು, ಅಮೀರರು ಸುಲ್ತಾನನ ವಿರುದ್ಧ ಷಡ್ಯಂತ್ರಗಳನ್ನು ಹೆಣೆಯುತ್ತಾರೆ. ನಕಲಿ ನಾಣ್ಯಗಳು ತಯಾರಾಗಿ ಆರ್ಥಿಕತೆ ಕುಸಿಯುತ್ತದೆ. ರಾಜ್ಯದ ಹಲವೆಡೆ ದಂಗೆಗಳು ಆರಂಭವಾಗುತ್ತವೆ. ರಾಜದ್ರೋಹಿಗಳು, ಧರ್ಮಾಂಧರು ತುಘಲಕ್‍ನ ಎಲ್ಲಾ ಮಹತ್ವಾಕಾಂಕ್ಷೆಗಳನ್ನು ಬುಡಮೇಲು ಮಾಡುತ್ತಾರೆ. ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಾರೆ. ಎಲ್ಲ ದಿಕ್ಕಿನಿಂದಲೂ ಅಸಹನೆ, ಅಸಹಕಾರ, ನಿರಾಶೆ ತುಘಲಕ್‍ನನ್ನು ಕಾಡಿ ಒಬ್ಬಂಟಿಗನನ್ನಾಗಿಸುತ್ತವೆ.

ಮಹತ್ವಾಕಾಂಕ್ಷಿಯಾಗಿದ್ದ ತುಘಲಕ್ ಕೋಮು ಸೌಹಾರ್ದತೆಯನ್ನು ಬಯಸಿದ್ದ, ಧರ್ಮಾಂಧರನ್ನು ದೂರವಿಟ್ಟಿದ್ದ, ಪ್ರಜೆಗಳ ಹಿತವನ್ನು ಆಲೋಚಿಸುತ್ತಿದ್ದ ಹಾಗೂ ಹಲವಾರು ಜನಪರ ನಿರ್ಧಾರಗಳನ್ನು ಜಾರಿಗೊಳಿಸಲು ಯತ್ನಿಸಿದ್ದ. ಎಲ್ಲ ದೊರೆಗಳಿಗಿಂತ ಭಿನ್ನವಾಗಿ ಆಲೋಚಿಸಿದ, ವಿಭಿನ್ನವಾಗಿ ರಾಜ್ಯಾಡಳಿತ ನಡೆಸಲು ಬಯಸಿದ, ಧರ್ಮವನ್ನು ರಾಜಕಾರಣದಿಂದ ದೂರವಿಡಲು ಆಶಿಸಿದ.. ಆದರ್ಶ ರಾಜ್ಯವೊಂದರ

ಸ್ಥಾಪನೆಗಾಗಿ ತಹತಹಿಸಿದ. ಹೀಗಾಗಿ ಲೋಕವಿರೋಧಕ್ಕೆ ಒಳಗಾದ ಮುಹಮದ್ ಬಿನ್ ತುಘಲಕ್ ಎಲ್ಲರ ಕಣ್ಣಲ್ಲಿ ಹುಚ್ಚನಾಗುತ್ತಾನೆ. ತಿಕ್ಕಲು ತುಘಲಕ್ ಎಂದೇ ಇತಿಹಾಸದಲ್ಲಿ ದಾಖಲಾಗುತ್ತಾನೆ.

ಕಾರ್ನಾಡರು ತುಘಲಕ್ ನಾಟಕವನ್ನು ಚದುರಂಗದ ಆಟದ ರೀತಿಯಲ್ಲಿ ಬಲು ಜಾಣ್ಮೆಯಿಂದ ಕಟ್ಟಿದ್ದಾರೆ. ಚದುರಂಗದಾಟವನ್ನು ರೂಪಕವಾಗಿ ನಾಟಕದಲ್ಲಿ ಬಳಸುತ್ತಾ ರಾಜ್ಯಾಡಳಿತವೆನ್ನುವುದು ಜಾಣ್ಮೆಯ ಆಟ ಎಂದು ಹೇಳುತ್ತಾರೆ. ಅರಸ ಹಾಗೂ ಅಗಸನನ್ನು ಮುಖಾಮುಖಿಯಾಗಿಸುತ್ತಾರೆ. ಕೊನೆಗೆ ಅರಸ ಸೋತು ಅಗಸನೇ ಗೆಲ್ಲುವುದರ ಮೂಲಕ ಈ ಚದುರಂಗದಾಟ ಮುಗಿಯುತ್ತದೆ.

ನಾಟಕದ ಟಿಕೆಟ್‍ಗಳಿಗಾಗಿ 9916212451/ 9901626701/ 9964656482 ಸಂಪರ್ಕಿಸಬಹುದು.

ಹಿಂದಿನ ಲೇಖನಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾದ ಜಿ.ಟಿ.ದೇವೇಗೌಡ: ಅನುದಾನ ಬಿಡುಗಡೆಗೆ ಮನವಿ
ಮುಂದಿನ ಲೇಖನವಸತಿ ಭೂಮಿಯಾಗಿ ಮಾರ್ಪಾಡದ ಕೃಷಿ ಭೂಮಿ ಖರೀದಿ ಅಕ್ರಮವಲ್ಲ: ಹೈಕೋರ್ಟ್‌