ಮನೆ ರಾಜ್ಯ ಪಿಎಸ್‌ ಐ ಹಗರಣ: ಮತ್ತೊಂದು ಪರೀಕ್ಷಾ ಕೇಂದ್ರದಲ್ಲಿ ಅಕ್ರಮ; ಮೂವರ ಬಂಧನ

ಪಿಎಸ್‌ ಐ ಹಗರಣ: ಮತ್ತೊಂದು ಪರೀಕ್ಷಾ ಕೇಂದ್ರದಲ್ಲಿ ಅಕ್ರಮ; ಮೂವರ ಬಂಧನ

0

ಕಲಬುರಗಿ (Kalaburagi)-ಪಿಎಸ್ಐ ಅಕ್ರಮ ನೇಮಕಾತಿಗೆ ‌ಸಂಬಂಧಿಸಿದಂತೆ ನಗರದ ಮತ್ತೊಂದು ಪರೀಕ್ಷಾ ‌ಕೇಂದ್ರವಾದ ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ.ಎಸ್. ಇರಾನಿ ಕಾಲೇಜಿನಲ್ಲಿ ಅಕ್ರಮ ನಡೆದಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.

ಈ ಸಂಬಂಧ ಸಿಐಡಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಏತನ್ಮಧ್ಯೆ ಮತ್ತೊಂದು ಪರೀಕ್ಷಾ ಕೇಂದ್ರದಲ್ಲಿಯೂ ಪರೀಕ್ಷಾ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲಿಯೂ ಸಿಐಡಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಎಂ.ಎಸ್. ಇರಾನಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮದ ಕುರಿತು ತನಿಖಾಧಿಕಾರಿ ಪ್ರಕಾಶ ರಾಠೋಡ ಸ್ಟೇಶನ್ ಬಜಾರ್ ಠಾಣೆಯಲ್ಲಿ ರುದ್ರಗೌಡ ಡಿ. ಪಾಟೀಲ, ಮಧ್ಯವರ್ತಿ ಚಂದ್ರಕಾಂತ ‌ಕುಲಕರ್ಣಿ, ಅಭ್ಯರ್ಥಿ ಪ್ರಭು, ಅವರ ತಂದೆ ಶರಣಪ್ಪ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ರುದ್ರಗೌಡ ಈಗಾಗಲೇ ಸಿಐಡಿ ಬಂಧನದಲ್ಲಿದ್ದು, ಪಾಟೀಲ ಅವರ ಲೆಕ್ಕ ಪರಿಶೋಧಕ ಚಂದ್ರಕಾಂತ ಕುಲಕರ್ಣಿ ಅವರನ್ನು ಸೋಮವಾರ ರಾತ್ರಿ ಬಂಧಿಸಲಾಯಿತು. ಪ್ರಭು ಹಾಗೂ ಶರಣಪ್ಪ ಅವರನ್ನು ಮಂಗಳವಾರ ಬೆಳಿಗ್ಗೆ ಬಂಧಿಸಲಾಗಿದೆ.

ಎಂ.ಎಸ್. ಇರಾನಿ ಕಾಲೇಜಿನ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಪ್ರಭುವನ್ನು ಸಿಐಡಿ ಅಧಿಕಾರಿಗಳು ಸೋಮವಾರ ‌ಸಂಜೆ ವಶಕ್ಕೆ ಪಡೆದು ವಿಚಾರಣೆ ‌ನಡೆಸಿದ್ದರು‌. ಪ್ರಭು ಪಿಎಸ್ಐ ನೇಮಕ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದರು. ಅಕ್ರಮದ ಮೂಲಕ ಆಯ್ಕೆಯಾಗಲು 50 ಲಕ್ಷ ರೂ. ಅನ್ನು ರುದ್ರಗೌಡ ಪಾಟೀಲಗೆ ನೀಡಲಾಗಿತ್ತು ಎಂದು ಹೇಳಿಕೆ ನೀಡಿದ್ದರು. ಇದರಲ್ಲಿ ಮಧ್ಯವರ್ತಿಯಾಗಿ ರುದ್ರಗೌಡ ಲೆಕ್ಕಪರಿಶೋಧಕ ಚಂದ್ರಕಾಂತ ‌ಕುಲಕರ್ಣಿ ಕೆಲಸ ಮಾಡಿದ್ದರು ಎಂದು ತನಿಖೆ ವೇಳೆ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.