ಬೆಂಗಳೂರು: ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ ಸುದ್ದುಗುಂಟೆಪಾಳ್ಯ ಠಾಣೆಯ ಪಿಎಸ್’ಐ ಮಂಜುನಾಥಸ್ವಾಮಿಯನ್ನು ಅಮಾನತುಗೊಳಿಸಿರುವುದಾಗಿ ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಏ.8ರಂದು ಸಂತ್ರಸ್ತೆ ಸಹೋದರನ ಸ್ನೇಹಿತನ ವರದಕ್ಷಿಣೆ ಪ್ರಕರಣದಲ್ಲಿ ಸಾಕ್ಷಿ ಹೇಳಲು ಠಾಣೆಗೆ ಬಂದಿದ್ದರು. ಆಗ ಪಿಎಸ್’ಐ ಮಂಜುನಾಥಸ್ವಾಮಿ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ. ಹೇಳಿಕೆ ಪಡೆಯುವ ವೇಳೆ ತನ್ನ ಸೊಂಟ ಮತ್ತು ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೆ, ತಡರಾತ್ರಿ ವಾಟ್ಸ್ಆ್ಯಪ್ ಚಾಟ್ ಮೂಲಕ ಮಾನಸಿಕ ಕಿರುಕುಳ ನೀಡಿದ್ದಾರೆ.
ಸಂತ್ರಸ್ತೆ ಕಾನೂನು ವಿದ್ಯಾರ್ಥಿನಿ ಎಂದು ಹೇಳಲಾಗಿದ್ದು, ವರದಕ್ಷಿಣೆ ಮತ್ತು ವಿಚ್ಛೇದನ ಪ್ರಕರಣ ಸಂಬಂಧ ಸಾಕ್ಷ್ಯ ಹೇಳಿಕೆ ನೀಡಲು ಹೋದಾಗ ದುರ್ಘಟನೆ ನಡೆದಿದೆ ಎಂದು ಸಂತ್ರಸ್ತೆ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ನಡೆಸಿದಾಗ ಮಂಜುನಾಥಸ್ವಾಮಿ ಸಂತ್ರಸ್ತೆ ಜತೆ ಅಸಭ್ಯವಾಗಿ ವರ್ತಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಸದ್ಯ ಅವರನ್ನು ಅಮಾನತುಗೊಳಿಸಿ, ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶ ನೀಡಲಾಗಿದೆ.
ಮಂಜುನಾಥ್ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ ಎಂದು ತಿಳಿಸಿದರು.