ಮನೆ ರಾಷ್ಟ್ರೀಯ ಪುಟಿನ್ ಭಾರತಕ್ಕೆ ಭೇಟಿ – ಸುಖೋಯ್‌ ಖರೀದಿಗೆ ಬಿಗ್‌ ಡೀಲ್‌ ಸಾಧ್ಯತೆ…!

ಪುಟಿನ್ ಭಾರತಕ್ಕೆ ಭೇಟಿ – ಸುಖೋಯ್‌ ಖರೀದಿಗೆ ಬಿಗ್‌ ಡೀಲ್‌ ಸಾಧ್ಯತೆ…!

0

ನವದೆಹಲಿ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಂದು 2 ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಇಂದು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ರಷ್ಯಾ-ಉಕ್ರೇನ್‌ ಯುದ್ಧ ಶುರುವಾದ ಬಳಿಕ ರಷ್ಯಾ ಅಧ್ಯಕ್ಷರ ಮೊದಲ ಭೇಟಿ ಇದಾಗಿದ್ದು, ಭಾರತಕ್ಕೂ ಇದು ಅತ್ಯಂತ ಮಹತ್ವದ್ದೆಂದು ಪರಿಗಣಿಸಲಾಗಿದೆ.

ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪುಟಿನ್‌ ಅವರನ್ನ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಸ್ವಾಗತಿಸಲಿದ್ದಾರೆ. ನಂತರ ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿಗಳ ನಿವಾಸದಲ್ಲಿ ನರೇಂದ್ರ ಮೋದಿ ಅವರೊಂದಿಗೆ ಔತಣ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಶುಕ್ರವಾರ ಔಪಚಾರಿಕ ಸ್ವಾಗತ ದೊರೆಯಲಿದೆ. ನಂತರ ಹೈದರಾಬಾದ್ ಹೌಸ್‌ನಲ್ಲಿ ನಡೆಯುವ 23ನೇ ಭಾರತ-ರಷ್ಯಾ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ಭಾರತ ಭೇಟಿಗೂ ಮೊದಲು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪುಟಿನ್‌ ಮಾತನಾಡುತ್ತಾ, ಭಾರತ ಯಾರ ಒತ್ತಡಕ್ಕೂ ಮಣಿಯದ ಪ್ರಬಲ ದೇಶ ಎಂದು ಹೊಗಳಿದ್ದಾರೆ. ನನ್ನ ಸ್ನೇಹಿತ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡ್ತಿದ್ದೇನೆ ಅನ್ನೋದು ನನಗೆ ನಿಜಕ್ಕೂ ಖುಷಿ ಕೊಟ್ಟಿದೆ. ಭಾರತದಲ್ಲಿ ಈ ಸಭೆಗೆ ನಾವು ಬಹಳ ಹಿಂದೆಯೇ ಒಪ್ಪಿಕೊಂಡಿದ್ದೆವು. ನಮಗೆ ಚರ್ಚಿಸಲು ಬಹಳಷ್ಟು ವಿಷಯಗಳಿವೆ.

ಪುಟಿನ್ ಭಾರತ ಭೇಟಿಯ ಸಮಯದಲ್ಲಿ ಹಲವು ಪ್ರಮುಖ ಒಪ್ಪಂದಗಳನ್ನ ನಿರೀಕ್ಷಿಸಲಾಗಿದೆ. ಶುಕ್ರವಾರ (ಡಿ.5) ನಡೆಯಲಿರುವ 23ನೇ ಭಾರತ-ರಷ್ಯಾ ಶೃಂಗಸಭೆಯಲ್ಲಿ ಪ್ರಮುಖ ರಕ್ಷಣಾ ಒಪ್ಪಂದಗಳು ಜರುಗುವ ಸಾಧ್ಯತೆಗಳಿವೆ. ಎಸ್‌-400, ಎಸ್‌-500 ವಾಯುರಕ್ಷಣಾ ವ್ಯವಸ್ಥೆ, ಸುಖೋಯ್‌ ಸು-57 5ನೇ ತಲೆಮಾರಿನ ಫೈಟರ್‌ ಜೆಟ್‌ ಮೆಗಾ ಡೀಲ್‌ಗಳ ಕುರಿತು ಮಾತುಕತೆ ನಡೆಯುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಕಳೆದ ಬಾರಿ ನಡೆದ ಏರ್‌ ಶೋ ವೇಳೆ ರಷ್ಯಾದ ಸು-57 ಜೆಟ್‌ ಅನ್ನು ಪ್ರದರ್ಶಿಸಲಾಗಿತ್ತು.

ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದ ಬಳಿಕ ಭಾರತ ಇನ್ನಷ್ಟು ಎಸ್‌-400 ವಾಯುರಕ್ಷಣಾ ವ್ಯವಸ್ಥೆ ಖರೀದಿಗೆ ಅನುಮೋದನೆ ನೀಡಿತು. ಎಸ್‌-400 5 ರೆಜಿಮೆಂಟ್‌ಗಳನ್ನು ಖರೀದಿಸುವುದರ ಜೊತೆಗೆ ಮುಂದುವರಿದ ಆವೃತ್ತಿಯಾದ ಎಸ್‌-500 ಖರೀದಿಸಲೂ ಸಹ ಭಾರತ ಎದುರು ನೋಡುತ್ತಿದೆ. ಹೀಗಾಗಿ ಶೃಂಗ ಸಭೆಯಲ್ಲಿ ಎಸ್‌-500 ಖರೀದಿಸುವ ಬಗ್ಗೆಯೂ ಮಾತುಕತೆ ನಡೆಯಲಿದೆ ಎಂದು ತಿಳಿದುಬಂದಿದೆ.