ಮನೆ ರಾಜ್ಯ ವಕ್ಫ್‌ ಭೂ ಕಬಳಿಕೆ, ರೇಷನ್‌ ಕಾರ್ಡ್‌ ರದ್ದು, ಮೊದಲಾದ ವಿಷಯಗಳ ಕುರಿತು ಸದನದಲ್ಲಿ ಪ್ರಶ್ನೆ ಹಾಗೂ...

ವಕ್ಫ್‌ ಭೂ ಕಬಳಿಕೆ, ರೇಷನ್‌ ಕಾರ್ಡ್‌ ರದ್ದು, ಮೊದಲಾದ ವಿಷಯಗಳ ಕುರಿತು ಸದನದಲ್ಲಿ ಪ್ರಶ್ನೆ ಹಾಗೂ ಹೋರಾಟ: ಆರ್‌.ಅಶೋಕ

0

ಅಧಿಕಾರಿಗಳಿಗೆ ನೇಣಿನ ಭಾಗ್ಯ, ಮುಳುಗುವ ಬೆಂಗಳೂರು ಸೃಷ್ಟಿ

ಬೆಂಗಳೂರು: ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಅನ್ಯಾಯಗಳ ವಿರುದ್ಧ ತೀವ್ರ ಹೋರಾಟ ಮಾಡಲಾಗುವುದು. ಎಲ್ಲ ಸಮಸ್ಯೆಗಳ ಬಗ್ಗೆ ಸದನದಲ್ಲಿ ಪ್ರಶ್ನಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

Join Our Whatsapp Group

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಈ ಬಾರಿ ಎರಡು ವಾರ ಮಾತ್ರ ಅಧಿವೇಶನ ನಡೆಸಲಾಗುತ್ತಿದೆ. ಇನ್ನೂ ಹೆಚ್ಚು ದಿನ ಅಧಿವೇಶನ ನಡೆಸಲು ಕೇಳಲಾಗುವುದು. ವಕ್ಫ್‌ ಮಂಡಳಿಯಿಂದಾಗುತ್ತಿರುವ ಭೂ ಕಬಳಿಕೆ ಜ್ವಲಂತ ಸಮಸ್ಯೆಯಾಗಿದೆ. ಬಡವರ ರೇಷನ್‌ ಕಾರ್ಡ್‌ ರದ್ದು ಮಾಡಿ ಗ್ಯಾರಂಟಿಗಾಗಿ ಹಣ ಉಳಿಸಲಾಗುತ್ತಿದೆ. ಈ ಸಮಸ್ಯೆಯ ವಿರುದ್ಧ ಅಧಿವೇಶನದಲ್ಲಿ ಹೋರಾಟ ಮಾಡಲಾಗುವುದು. ಅಬಕಾರಿ ಇಲಾಖೆಯ ಹಗರಣ, ಬೆಳೆನಾಶಕ್ಕೆ ಪರಿಹಾರ ಮೊದಲಾದ ಸಮಸ್ಯೆಯ ವಿರುದ್ಧವೂ ಹೋರಾಟ ಮಾಡಲಾಗುವುದು ಎಂದರು.

ಇದೊಂದಿ ರೀತಿ ಗುರುವಾರದ ಸರ್ಕಾರ. ಕೇವಲ ಒಂದು ದಿನ ಮಾತ್ರ ಇಲ್ಲಿ ಸಚಿವರು, ಅಧಿಕಾರಿಗಳು ಸಭೆ ಮಾಡುತ್ತಾರೆ. ಉತ್ತರ ಕರ್ನಾಟಕದ ಜಿಲ್ಲೆಗಳ ಸಮಸ್ಯೆ ಬಗ್ಗೆ ಚರ್ಚಿಸಲು ನಾನು ಸಭೆ ನಡೆಸಲಿದ್ದೇನೆ. ಈ ಹಿಂದೆ ಕಲ್ಯಾಣ ಕರ್ನಾಟಕ ಕುರಿತು ಸರ್ಕಾರದಿಂದ ಸಭೆ ನಡೆದಿದೆ. ಆ ಬಳಿಕ ಯಾವುದೇ ಸುದ್ದಿ ಇಲ್ಲ. ಬ್ರ್ಯಾಂಡ್‌ ಬೆಂಗಳೂರು ಎಂದು ಹೇಳಿ, ಮಳೆ ಬಂದು ಮುಳುಗುವ ಬೆಂಗಳೂರು ಸೃಷ್ಟಿಯಾಗಿದೆ. ಮಳೆಯಿಂದಾಗಿ ರಸ್ತೆ ಗುಂಡಿ ಉಂಟಾಗಿ ವಾಹನ ಚಾಲಕರಿಗೆ ಬೆನ್ನು ನೋವು ಉಂಟಾಗಿದೆ. ಜಯನಗರ ಶಾಸಕರು ಸೇರಿದಂತೆ ಅನೇಕ ಶಾಸಕರಿಗೆ ಅನುದಾನ ಕಡಿತವಾಗಿದೆ. ಹೀಗೆ ಮೊದಲಾದ ವಿಷಯಗಳ ಬಗ್ಗೆ ಪ್ರಶ್ನಿಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಅಧಿಕಾರಿಗಳಿಗೆ ನೇಣಿನ ಭಾಗ್ಯ ನೀಡಲಾಗಿದೆ. ಅಧಿಕಾರಿಗಳು ಒಂದೋ ವರ್ಗಾವಣೆಯಾಗಬೇಕು ಅಥವಾ ನೇಣು ಹಾಕಿಕೊಳ್ಳಬೇಕು ಎಂಬ ಸ್ಥಿತಿ ಇದೆ. ರೌಡಿಗಳನ್ನು ಜೈಲಿಗೆ ಹಾಕುವ ಬದಲು ಪ್ರಕರಣ ಹಿಂಪಡೆಯಲಾಗಿದೆ. ಇದರ ವಿರುದ್ಧವೂ ಮಾತನಾಡಲಾಗುವುದು ಎಂದರು.

ನಮ್ಮದು ಒಂದೇ ತಂಡ

ಬಿಜೆಪಿ ಒಂದೇ ತಂಡವಾಗಿ ಸರ್ಕಾರದ ವಿರುದ್ಧ ಹೋರಾಡಲಿದೆ. ಬಿಜೆಪಿಯ ಎಲ್ಲ ನಾಯಕರು ಹಾಗೂ ಮುಖಂಡರೊಂದಿಗೆ ಹೋರಾಟ ಮಾಡುವ ಬಗ್ಗೆ ಚರ್ಚಿಸುತ್ತೇನೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದ್ದು, ಸಿಎಂ ಸಿದ್ದರಾಮಯ್ಯನವರಿಂದ ಸರ್ಕಾರ ಪಾಪರ್‌ ಆಗಿದೆ. ಜನರು ಕೂಡ ಈ ಬಗ್ಗೆ ಹೇಳುತ್ತಿದ್ದಾರೆ. ಒಂದೂವರೆ ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ ಎಂದರು.

ವಿರೋಧ ಪಕ್ಷದಲ್ಲಿ ಕಾಂಗ್ರೆಸ್‌ ಇದ್ದಾಗ ಕೋವಿಡ್‌ ಹಗರಣ ಇರುವ ಬಗ್ಗೆ ಮಾತನಾಡಲಿಲ್ಲ. ಈಗ ಮಾತ್ರ ಆ ಬಗ್ಗೆ ಮಾತನಾಡುತ್ತಿದೆ. ನಮ್ಮ ಅವಧಿ ಹಾಗೂ ಈಗಿನ 16 ತಿಂಗಳ ಅವಧಿಯ ಆಡಳಿತದ ಎಲ್ಲವನ್ನೂ ಸಿಬಿಐಗೆ ವಹಿಸಲಿ. ನಾವು ತನಿಖೆಗೆ ತಯಾರಿದ್ದೇವೆ ಎಂದರು.

ಕಾಂಗ್ರೆಸ್‌ ನಾಯಕರಂತೆಯೇ ಇವಿಎಂ ಮೇಲೆ ನಮಗೂ ಅನುಮಾನವಿದೆ. ಆದ್ದರಿಂದ ಕಾಂಗ್ರೆಸ್‌ನ ಎಲ್ಲ ಶಾಸಕರು ರಾಜೀನಾಮೆ ನೀಡಲಿ. ನಂತರ ಒಂದಾಗಿ ಚುನಾವಣೆ ಎದುರಿಸಬಹುದು. ಮಹಾರಾಷ್ಟ್ರದಲ್ಲಿ ಯಾಕೆ ಸೋತಿದ್ದೇವೆ ಎಂದು ಕಾಂಗ್ರೆಸ್‌ ಆತ್ಮಾವಲೋಕನ ಮಾಡಿಕೊಳ್ಳಲಿ. ಅದು ಬಿಟ್ಟು ಇವಿಎಂ ಮೇಲೆ ಆರೋಪ ಮಾಡುವುದಲ್ಲ ಎಂದರು.