ಲಕ್ನೋ : ನಾಯಿ ಕಚ್ಚಿದ್ದ ಎಮ್ಮೆಯ ಹಾಲು ಬಳಸಿ ತಯಾರಿಸಿದ್ದ ರಾಯ್ತಾ ಸೇವಿಸಿದ್ದ ಜನರಲ್ಲಿ ರೇಬೀಸ್ ಆತಂಕ ಮೂಡಿದೆ. ಹೀಗಾಗಿ ಮುನ್ನೆಚ್ಚರಿಕೆ ದೃಷ್ಟಿಯಿಂದ 200 ಜನರಿಗೆ ರೇಬೀಸ್ ಲಸಿಕೆ ನೀಡಲಾಗಿದೆ.
ಉತ್ತರ ಪ್ರದೇಶದ ಬುಡೌನ್ ಜಿಲ್ಲೆಯ ಪಿಪ್ರೌಲಿ ಗ್ರಾಮದ ಜನರಲ್ಲಿ ರೇಬೀಸ್ ಆತಂಕ ಮೂಡಿದೆ. ಇಲ್ಲಿನ ನಿವಾಸಿಗಳು ಡಿ.23ರಂದು ನಡೆದಿದ್ದ ಅಂತ್ಯಕ್ರಿಯೆಯೊಂದಕ್ಕೆ ತೆರಳಿದಾಗ ಅಲ್ಲಿ ರಾಯ್ತಾವನ್ನು ಸೇವಿಸಿದ್ದರು. ಅದಾದ ಬಳಿಕ ಡಿ.26ರಂದು ಎಮ್ಮೆ ರೇಬೀಸ್ ರೋಗದಿಂದ ಸಾವನ್ನಪ್ಪಿತ್ತು.
ಅದೇ ಸತ್ತ ಎಮ್ಮೆ ಹಾಲಿನಿಂದಲೇ ರಾಯ್ತಾವನ್ನು ತಯಾರಿಸಲಾಗಿತ್ತು ಎಂದು ತಿಳಿದ ಕೂಡಲೇ 200 ಜನರು ಮುನ್ನೆಚ್ಚರಿಕೆಯಾಗಿ ಉಜಾನಿ ಸಮುದಾಯ ಆರೋಗ್ಯ ಕೇಂದ್ರದಕಲ್ಲಿ ರೇಬೀಸ್ ಲಸಿಕೆ ಪಡೆದುಕೊಂಡಿದ್ದಾರೆ. ಇದರಿಂದಾಗಿ ಸದ್ಯ ಗ್ರಾಮದಲ್ಲಿ ರೇಬೀಸ್ ಕಾಯಿಲೆ ಬಗ್ಗೆ ಆತಂಕ ಮನೆಮಾಡಿದೆ.
ಈ ಕುರಿತು ಉಜಾನಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ರಾಮೇಶ್ವರ ಮಿಶ್ರಾ ಮಾತನಾಡಿ, ಎಮ್ಮೆಗೆ ನಾಯಿ ಕಚ್ಚಿದೆ ಹಾಗೂ ಸಾಯುವ ಮೊದಲು ಎಮ್ಮೆಯಲ್ಲಿ ರೇಬೀಸ್ ಲಕ್ಷಣ ಕಾಣಿಸಿದ್ದವು. ಚಿಕಿತ್ಸೆಗಿಂತ ನಿಯಂತ್ರಿಸುವುದು ಉತ್ತಮ. ಅನುಮಾನ ಇದ್ದ ಎಲ್ಲರಿಗೂ ರೇಬೀಸ್ ಲಸಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ, ಹಾಲನ್ನು ಕುದಿಸಿದ ನಂತರ ರೇಬೀಸ್ ಬರುವ ಅಪಾಯವಿರುವುದಿಲ್ಲ, ಆದರೆ ಯಾವುದೇ ಅಪಾಯವನ್ನು ತಡೆಗಟ್ಟಲು ಲಸಿಕೆ ಹಾಕಲಾಗುತ್ತಿದೆ. ಗ್ರಾಮದಲ್ಲಿ ಇಲ್ಲಿಯವರೆಗೆ ಯಾವುದೇ ರೋಗ ಹರಡಿಲ್ಲ ಮತ್ತು ಪರಿಸ್ಥಿತಿ ಸಂಪೂರ್ಣವಾಗಿ ಸಾಮಾನ್ಯವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.















