ನವದೆಹಲಿ (New Delhi): ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಮೂರು ಬಾರಿ ವಿಚಾರಣೆ ಎದುರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು (ಸೋಮವಾರ) ಮತ್ತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ.
ಜೂನ್ 13ರಿಂದ 15ರವರೆಗೆ ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಿದ್ದರು. ಬಳಿಕ ಅವರಿಗೆ ಮತ್ತೊಂದು ಸಮನ್ಸ್ ನೀಡಿದ್ದ ಜಾರಿ ನಿರ್ದೇಶನಾಲಯ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ತಾಯಿ ಸೋನಿಯಾ ಗಾಂಧಿ ಅವರ ಅನಾರೋಗ್ಯದ ಕಾರಣ ನೀಡಿ ಶುಕ್ರವಾರದ ಬದಲಿಗೆ ಬೇರೆ ದಿನಾಂಕ ನೀಡುವಂತೆ ರಾಹುಲ್ ಮನವಿ ಮಾಡಿದ್ದರು. ಇದರಂತೆ ಸೋಮವಾರಕ್ಕೆ ವಿಚಾರಣೆ ನಿಗದಿಪಡಿಸಲಾಗಿದೆ.
ಕೋವಿಡ್ ನಂತರದ ಆರೋಗ್ಯ ಸಮಸ್ಯೆಯ ಕಾರಣಗಳಿಂದಾಗಿ ಸೋನಿಯಾ ಗಾಂಧಿ ಕಳೆದ ವಾರ ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ತಾಯಿಯ ಆರೋಗ್ಯ ವಿಚಾರಿಸಿದ್ದರು.
ಕೇಂದ್ರ ಸರ್ಕಾರದ ‘ಹಗೆತನದ ರಾಜಕಾರಣ’ ವನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.