ಮನೆ ಮನರಂಜನೆ ಗಾಯನ ನಿಲ್ಲಿಸಿದ ‘ಗಾನಕೋಗಿಲೆ’

ಗಾಯನ ನಿಲ್ಲಿಸಿದ ‘ಗಾನಕೋಗಿಲೆ’

0

ಮುಂಬೈ:ದೇಶದ ಗಾನಕೋಗಿಲೆಯೆಂದೇ ಪ್ರಸಿದ್ಧರಾದ ಗಾನಕೋಗಿಲೆ ಲತಾ ಮಂಗೇಶ್ಕರ್ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ.

ಕೋವಿಡ್ ಪಾಸಿಟಿವ್ ಬಂದು ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಲತಾ ಮಂಗೇಶ್ಕರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. 

92 ವರ್ಷದ ಲತಾ ಮಂಗೇಶ್ಕರ್ ಕೋವಿಡ್ ಸೋಂಕಿನ ಸೌಮ್ಯ ಲಕ್ಷಣ ಕಂಡುಬಂದು ಕಳೆದ ಜನವರಿ 8ರಂದು ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿದ್ದರು.  ಕೆಲ ದಿನಗಳ ನಂತರ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಸುಧಾರಣೆಯಾಗಿದ್ದರಿಂದ ವೆಂಟಿಲೇಟರ್ ನೆರವನ್ನು ತೆಗೆಯಲಾಗಿತ್ತು. ಆದರೆ ನಿನ್ನೆ ಮತ್ತೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟು ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದರು. 

ಲತಾ ಮಂಗೇಶ್ಕರ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಡಾ ಪ್ರತೀತ್ ಸಮ್ದನಿ ಮಾಹಿತಿ ಒದಗಿಸಿದ್ದು, ಲತಾ ಮಂಗೇಶ್ಕರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 8 ಗಂಟೆ 12 ನಿಮಿಷಕ್ಕೆ ನಿಧನ ಹೊಂದಿದರು. ಕೋವಿಡ್ ಸೋಂಕಿಗೆ ತುತ್ತಾಗಿ ಜನವರಿ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿ 28 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಭಾರತೀಯ ಚಿತ್ರರಂಗದ ಶ್ರೇಷ್ಠ ಗಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಮಂಗೇಶ್ಕರ್ ಅವರು 1942ರಲ್ಲಿ 13 ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಹಲವಾರು ಭಾರತೀಯ ಭಾಷೆಗಳಲ್ಲಿ 30,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಲತಾ ಮಂಗೇಶ್ಕರ್ ಅವರು ಪದ್ಮಭೂಷಣ, ಪದ್ಮವಿಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಬಹು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. 

ತಮ್ಮ 13ನೇ ವಯಸ್ಸಿನಲ್ಲೇ ಹಾಡುವುದಕ್ಕೆ ಪ್ರಾರಂಭಿಸಿದ ಲತಾ ಮಂಗೇಶ್ಕರ್ ಇದುವರೆಗೂ ಹಿಂದಿ ಭಾಷೆಯೊಂದರಲ್ಲೇ ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಗೂ ಭಾರತದ 36 ವಿವಿಧ ಭಾಷೆಗಳಲ್ಲಿ ಹಾಡಿದ ಕೀರ್ತಿ ಅವರದ್ದು. ಕನ್ನಡದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ ‘ಬೆಳ್ಳನೆ ಬೆಳಗಾಯಿತು..’ ಹಾಡನ್ನು ಹಾಡಿ ಕನ್ನಡ ಚಿತ್ರರಂಗಕ್ಕೂ ಲತಾ ಪ್ರವೇಶ ಮಾಡಿದ್ದರು.

ವಿದೇಶಿ ಭಾಷೆಗಳಲ್ಲಿಯೂ ಲತಾ ಮಂಗೇಶ್ಕರ್ ಕೂಡ ಹಾಡಿದ್ದಾರೆ.ಭಾರತೀಯ ಭಾಷೆಗಳಲ್ಲಿ ಅವರು ಹೆಚ್ಚಾಗಿ ಹಾಡಿದ್ದು ಹಿಂದಿ, ಮರಾಠಿ ಭಾಷೆಗಳಲ್ಲಿ. ಬಂಗಾಳಿಯಲ್ಲಿ 185 ಹಾಡು ಹಾಡಿದ್ದಾರೆ, ದಾದಾಸಾಹೇಬ್ ಫಾಲ್ಕೆ, ಭಾರತ ರತ್ನ ಸೇರಿ ಸಾಕಷ್ಟು ಪ್ರಶಸ್ತಿಗಳನ್ನು ಲತಾ ಮಂಗೇಶ್ಕರ್ ಪಡೆದುಕೊಂಡಿದ್ದಾರೆ.

ಲತಾ ಅವರ ಪಾರ್ಥಿವ ಶರೀರವನ್ನು ಅಪರಾಹ್ನದವರೆಗೆ ಮುಂಬೈನ ಅವರ ನಿವಾಸದಲ್ಲಿ ಇರಿಸಲಾಗುತ್ತದೆ.