ಮನೆ ಪೌರಾಣಿಕ ರೈಭ್ಯ-ಯವಕ್ರೀತ

ರೈಭ್ಯ-ಯವಕ್ರೀತ

0

ರೈಭ್ಯ-ಯವಕ್ರೀತರ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ತೀರ್ಥಯಾತ್ರಾ ಪರ್ವ (ಅಧ್ಯಾಯ ೧೩೫-೧೩೯) ದಲ್ಲಿ ಬರುತ್ತದೆ. ಯುಧಿಷ್ಠಿರನ ತೀರ್ಥಯಾತ್ರಾ ಸಮಯದಲ್ಲಿ ಈ ಕಥೆಯನ್ನು ಋಷಿ ಲೋಮಶನು ಯುಧಿಷ್ಠಿರನಿಗೆ ಹೇಳಿದನು.

ಭರದ್ವಾಜ ಮತ್ತು ರೈಭ್ಯರಿಬ್ಬರೂ ಸ್ನೇಹಿತರಾಗಿದ್ದರು. ಪರಸ್ಪರರನ್ನು ಪ್ರೀತಿಸಿ ಅವರು ವನಾಂತರದಲ್ಲಿ ಒಟ್ಟಿಗೇ ವಾಸಿಸುತ್ತಿದ್ದರು. ರೈಭ್ಯನಿಗೆ ಅರಾವಸು ಮತ್ತು ಪರಾವಸು ಎಂಬ ಇಬ್ಬರು ಮಕ್ಕಳಿದ್ದರು. ಭರದ್ವಾಜನಿಗೆ ಯವಕ್ರೀ ಎನ್ನುವ ಮಗನಿದ್ದನು. ರೈಭ್ಯ ಮತ್ತು ಅವನ ಮಕ್ಕಳು ವಿದ್ವಾಂಸರಾಗಿದ್ದರು ಮತ್ತು ಇನ್ನೊಬ್ಬನು ತಪಸ್ವಿಯಾಗಿದ್ದನು. ಆದರೂ ಬಾಲ್ಯದಿಂದಲೂ ಬೆಳೆದಿದ್ದ ಅವರ ಪ್ರೀತಿಯು ಅತುಲ್ಯವಾಗಿತ್ತು. ತಪಸ್ವಿಯಾದ ತನ್ನ ತಂದೆಯನ್ನು ವಿಪ್ರರು ಪುರಸ್ಕರಿಸಲಿಲ್ಲ ಮತ್ತು ರೈಭ್ಯ ಮತ್ತು ಅವನ ಮಕ್ಕಳನ್ನು ಸತ್ಕರಿಸುತ್ತಿದ್ದರು ಎನ್ನುವುದನ್ನು ಯವಕ್ರಿಯು ನೋಡಿದನು. ಆ ತೇಜಸ್ವಿಯು ಪರಿತಪಿಸಿದನು ಮತ್ತು ಕೋಪಕ್ಕೆ ಸಿಲುಕಿ ವೇದವನ್ನು ತಿಳಿದುಕೊಳ್ಳಲು ಘೋರವಾದ ತಪಸ್ಸನ್ನು ತಪಿಸಿದನು. ಚೆನ್ನಾಗಿ ಸಮಿತ್ತುಗಳಿರುವ ಮಹಾ ಅಗ್ನಿಯಲ್ಲಿ ತನ್ನ ಶರೀರವನ್ನು ಸುಡುತ್ತಿದ್ದನು. ಇಂದ್ರನು ಆ ಮಹಾತಪಸ್ಸಿನ ಕುರಿತು ತಿಳಿದು ಸಂತಾಪಗೊಂಡನು. ಆಗ ಇಂದ್ರನು ಯವಕ್ರೀತನ ಬಳಿಬಂದು “ಯಾವ ಕಾರಣಕ್ಕಾಗಿ ನೀನು ಈ ಉತ್ತಮ ತಪಸ್ಸನ್ನು ತಪಿಸುತ್ತಿದ್ದೀಯೆ?” ಎಂದು ಕೇಳಿದನು.

ಯವಕ್ರಿಯು ಹೇಳಿದನು: “ಸುರಗಣಾರ್ಚಿತ! ದ್ವಿಜರು ಕಲಿತು ಪಡೆಯುವ ವೇದಗಳು ನನಗೆ ಕಾಣಿಸಿಕೊಳ್ಳಲಿ ಎಂದು ನಾನು ಈ ಪರಮ ತಪಸ್ಸನ್ನು ತಪಿಸುತ್ತಿದ್ದೇನೆ. ಸ್ವಾಧ್ಯಾಯಕ್ಕಾಗಿ ನಾನು ಇದನ್ನು ಕೈಗೊಂಡಿದ್ದೇನೆ. ಈ ತಪಸ್ಸಿನಿಂದ ಸರ್ವ ಜ್ಞಾನಗಳನ್ನು ತಿಳಿಯ ಬಯಸುತ್ತೇನೆ. ಗುರುಮುಖದಿಂದ ವೇದವನ್ನು ಪಡೆಯಲು ಬಹಳಷ್ಟು ಸಮಯ ಬೇಕಾಗುತ್ತದೆ. ಆದುದರಿಂದ ಅದನ್ನು ಈಗಲೇ ಪಡೆಯಲು ಈ ಪರಮ ಯತ್ನದಲ್ಲಿ ತೊಡಗಿದ್ದೇನೆ.”

ಇಂದ್ರನು ಹೇಳಿದನು: “ವಿಪ್ರರ್ಷೇ! ನೀನು ಹೋಗಲು ಇಚ್ಛಿಸುವ ಮಾರ್ಗವು ಸರಿಯಾದ ಮಾರ್ಗವಲ್ಲ! ಈ ವಿಧಾನವು ನಿನ್ನ ಕಾರ್ಯಕ್ಕೆ ಬರುವುದಿಲ್ಲ. ಹೋಗು! ವೇದವನ್ನು ಗುರುಮುಖದಿಂದ ತಿಳಿದುಕೊ!”

ಹೀಗೆ ಹೇಳಿ ಇಂದ್ರನು ಹೊರಟುಹೋದನು. ಅಮಿತವಿಕ್ರಮಿ ಯವಕ್ರಿಯಾದರೋ ತನ್ನ ತಪಸ್ಸಿನ ಪ್ರಯತ್ನವನ್ನು ಮುಂದುವರೆಸಿದನು. ಆ ಮಹಾತಪಸ್ವಿಯ ಘೋರ ತಪಸ್ಸಿನ ಉರಿಯಿಂದ ದೇವೇಂದ್ರನು ತುಂಬಾ ಕಷ್ಟಕ್ಕೊಳಗಾದನು. ಪುನಃ ಮತ್ತೊಮ್ಮೆ ಇಂದ್ರನು ತೀವ್ರವಾದ ತಪಸ್ಸಿನಿಂದ ಸುಡುತ್ತಿರುವ ಆ ಮಹಾಮುನಿಯ ಬಳಿಬಂದು ಅವನನ್ನು ತಡೆದನು: “ನೀನು ಗುರಿಯನ್ನು ತಲುಪಲು ಅಶಕ್ಯ. ನಿನ್ನ ಮತ್ತು ನಿನ್ನ ತಂದೆಗೆ ವೇದಗಳು ತಾವಾಗಿಯೇ ಪ್ರಕಟವಾಗಬೇಕು ಎನ್ನುವ ನಿನ್ನ ಯೋಚನೆಯೂ ಸರಿಯಲ್ಲ.”

ಯವಕ್ರಿಯು ಹೇಳಿದನು: “ದೇವರಾಜ! ಈ ರೀತಿಯಲ್ಲಿ ನನ್ನ ಆಸೆಯನ್ನು ಪೂರೈಸಿಕೊಳ್ಳಲಾಗದಿದ್ದರೆ ಮಹಾ ನಿಯಮಗಳೊಂದಿಗೆ ಇನ್ನೂ ಘೋರತರ ತಪಸ್ಸನ್ನು ತಪಿಸುತ್ತೇನೆ. ಕೇಳು! ಇಂದು ನಾನು ಬಯಸಿದುದೆಲ್ಲವನ್ನೂ ಮಾಡಲು ನಿನಗೆ ಇಷ್ಟವಿಲ್ಲದಿದ್ದರೆ ಉರಿಯುತ್ತಿರುವ ಅಗ್ನಿಯಲ್ಲಿ ನನ್ನ ದೇಹದ ಒಂದೊಂದು ಅಂಗವನ್ನೂ ಆಹುತಿಯನ್ನಾಗಿ ನೀಡುತ್ತೇನೆ.”

ಆ ಮಹಾತ್ಮ ಮುನಿಯ ನಿರ್ಧಾರವು ಅದೆಂದು ತಿಳಿದ ಆ ಬುದ್ಧಿವಂತ ಇಂದ್ರನು ಅವನನ್ನು ತಡೆಯುವ ಉಪಾಯದ ಕುರಿತು ಮನಸ್ಸಿನಲ್ಲಿಯೇ ಚಿಂತಿಸಿದನು. ಆಗ ಇಂದ್ರನು ಅನೇಕ ನೂರುವರ್ಷಗಳ ದುರ್ಬಲನೂ ಕೃಶನಾಗಿಯೂ ಆದ ತಪಸ್ವಿ ಬ್ರಾಹ್ಮಣನ ರೂಪವನ್ನು ತಳೆದನು. ಯವಕ್ರೀತನು ತನ್ನ ಶೌಚಕರ್ಮಗಳಿಗೆ ಹೋಗುತ್ತಿದ್ದ ಭಾಗೀರಥಿಯ ತೀರ್ಥಕ್ಕೆ ಹೋಗಿ ಅಲ್ಲಿ ಮರಳಿನ ರಾಶಿಯಿಂದ ಸೇತುವನ್ನು ಕಟ್ಟ ತೊಡಗಿದನು. ಆ ದ್ವಿಜೋತ್ತಮನು ತಾನು ಹೇಳಿದ ಮಾತಿನಂತೆ ನಡೆದುಕೊಳ್ಳದೇ ಇದ್ದಾಗ ಯವಕ್ರಿಗೆ ಪಾಠಕಲಿಸಲು ಇಂದ್ರನು ಒಂದೊಂದೇ ಮುಷ್ಟಿ ಮರಳನ್ನು ಭಾಗೀರಥಿಯಲ್ಲಿ ಹಾಕುತ್ತಾ ಗಂಗೆಯನ್ನು ಮರಳಿನಿಂದ ತುಂಬಿ ಸೇತುವೆ ಕಟ್ಟಲು ಪ್ರಾರಂಭಿಸಿದನು. ಸೇತುವೆ ಕಟ್ಟಲು ಪ್ರಯತ್ನಿಸುತ್ತಿದ್ದ ಅವನನ್ನು ನೋಡಿದ ಆ ಪುನಿಪುಂಗವ ಯವಕ್ರಿಯು ದೊಡ್ಡದಾಗಿ ನಕ್ಕು ಈ ಮಾತುಗಳನ್ನಾಡಿದನು: “ಬ್ರಾಹ್ಮಣ! ಇದೇನು ನಡೆಯುತ್ತಿದೆ? ಏನು ಮಾಡಲು ಪ್ರಯತ್ನಿಸುತ್ತಿದ್ದೀಯೆ? ನೀನು ಮಾಡುತ್ತಿರುವ ಈ ಮಹಾ ಪ್ರಯತ್ನವು ನಿರರ್ಥಕ!”

ಇಂದ್ರನು ಹೇಳಿದನು: “ಗಂಗೆಗೆ ಸೇತುವೆಯನ್ನು ಕಟ್ಟಿದರೆ ದಾಟಲು ಸುಲಭವಾಗುತ್ತದೆ. ಪುನಃ ಪುನಃ ಹೋಗಿ ಬಂದು ಮಾಡುವ ಜನರಿಗೆ ಕಷ್ಟವಾಗುತ್ತಿದೆ.”

ಯವಕ್ರಿಯು ಹೇಳಿದನು: “ಅತಿಪ್ರವಾಹದಿಂದ ಹರಿಯುತ್ತಿರುವ ಇದಕ್ಕೆ ಸೇತುವೆಯನ್ನು ಕಟ್ಟಲು ಸಾಧ್ಯವಿಲ್ಲ. ಅಶಕ್ಯವಾಗಿರುವುದನ್ನು ಮಾಡುವುದನ್ನು ಬಿಟ್ಟು ಶಕ್ಯವಾದುದನ್ನು ಪ್ರಯತ್ನಿಸು.”

ಇಂದ್ರನು ಹೇಳಿದನು: “ನೀನು ಹೇಗೆ ವೇದಗಳಿಗಾಗಿ ಅಶಕ್ಯವಾದ ತಪಸ್ಸಿನಲ್ಲಿ ತೊಡಗಿದ್ದೀಯೋ ಹಾಗೆ ನಾನೂ ಕೂಡ ಈ ಅಶಕ್ಯವಾದುದನ್ನು ಮಾಡುವ ಭಾರವನ್ನು ಹೊತ್ತಿದ್ದೇನೆ.”

ಯವಕ್ರಿಯು ಹೇಳಿದನು: “ತ್ರಿದಶೇಶ್ವರ! ನನ್ನ ಪ್ರಯತ್ನವು ನಿನ್ನ ಈ ಪ್ರಯತ್ನದಂತೆ ನಿರರ್ಥಕವೆಂದು ನೀನು ಯೋಚಿಸುವೆಯಾದರೆ, ಶಕ್ಯವಾದ ಏನನ್ನು ನಾನು ಮಾಡಬೇಕು?”

ಇಂದ್ರನು ಆ ಮಹಾತಪಸ್ವಿಗೆ ಕೇಳಿದ ವರಗಳನ್ನು ಕೊಟ್ಟನು – “ನಿನಗೂ ಮತ್ತು ನಿನ್ನ ತಂದೆಗೂ ನೀನು ಬಯಸಿದಂತೆ ವೇದಗಳು ಪ್ರಕಟಿತವಾಗುತ್ತವೆ. ಮತ್ತು ನೀನು ಏನನ್ನೆಲ್ಲಾ ಬಯಸಿದ್ದೀಯೋ ಅವುಗಳನ್ನೂ ಪಡೆಯುತ್ತೀಯೆ. ಯವಕ್ರಿ! ಈಗ ಹೋಗು!” ಬಯಸಿದ್ದುದನ್ನು ಪಡೆದ ಅವನು ತನ್ನ ತಂದೆಗೆ ಹೋಗಿ ಹೇಳಿದನು.

ಯವಕ್ರಿಯು ಹೇಳಿದನು: “ತಂದೇ! ನಮಗಿಬ್ಬರಿಗೂ ವೇದಗಳು ಪ್ರಕಟಗೊಳ್ಳುತ್ತವೆ, ಮತ್ತು ಇತರರಿಗಿಂತ ಮೇಲಾಗಬಹುದು. ಈ ರೀತಿಯ ವರವನ್ನು ನಾನು ಪಡೆದಿದ್ದೇನೆ.”

ಭರದ್ವಾಜನು ಹೇಳಿದನು: “ಮಗೂ! ನೀನು ಬಯಸಿದ ವರಗಳನ್ನು ಪಡೆದು ನಿನಗೆ ಹೆಮ್ಮೆಯಿನಿಸಿರಬಹುದು. ಆ ಸೊಕ್ಕು ತುಂಬಿ ನೀನು ಬೇಗನೇ ಅತಿ ಕೆಟ್ಟದಾಗಿ ವಿನಾಶವನ್ನು ಹೊಂದುತ್ತೀಯೆ. ಇದರ ಮೇಲೆ ಹಿಂದೆ ದೇವತೆಗಳು ಹೇಳಿದ ಗಾಥೆಯನ್ನು ಹೇಳುತ್ತಾರೆ: “ಹಿಂದೆ ಬಾಲಧಿ ಎಂಬ ಹೆಸರಿನ ವೀರ್ಯವಂತ ಋಷಿಯಿದ್ದನು. ಅವನು ಪುತ್ರಶೋಕದಿಂದ ಉದ್ವಿಗ್ನನಾಗಿ ನನಗೆ ಅಮರನಾದ ಮಗನಾಗಲಿ ಎಂದು ದುಷ್ಕರ ತಪಸ್ಸನ್ನು ತಪಿಸಿದನು ಮತ್ತು ಅಂಥವನು ಅವನಿಗೆ ದೊರಕಿದ ಕೂಡ. ದೇವತೆಗಳು ಅವನಿಗೆ ವರವನ್ನಿತ್ತರೂ ಅವನನ್ನು ಅಮರರಿಗೆ ಸಮನಾಗಿ ಮಾಡಲಿಲ್ಲ. ಮನುಷ್ಯರು ಅಮರರಾಗಿರುವುದಿಲ್ಲ. ಅವನ ಆಯಸ್ಸು ನಿಮಿತ್ತವಾಗುತ್ತದೆ. ಬಾಲಧಿಯು ಹೇಳಿದನು: “ಸುರಸತ್ತಮರೇ! ಎಲ್ಲಿಯವರೆಗೆ ಈ ಪರ್ವತಗಳು ಶಾಶ್ವತವಾಗಿ ನಿಂತಿರುತ್ತವೆಯೋ ಅಲ್ಲಿಯವರೆಗೆ ನನ್ನ ಮಗನ ಆಯಸ್ಸು ಅಕ್ಷಯವಾಗಿ ಇರಲಿ ಎಂದು ನಿಮಿತ್ತವಾಗಿಸಿ.” ಅನಂತರ ಅವನಿಗೆ ಸದಾ ಕೋಪಿಷ್ಟನಾಗಿದ್ದ ಮೇಧಾವೀ ಮಗನು ಹುಟ್ಟಿದನು. ಅವನು ತನಗಿದ್ದ ವರದ ಕುರಿತು ಕೇಳಿ ಸೊಕ್ಕಿನಿಂದ ಋಷಿಗಳನ್ನು ಅಪಮಾನಿಸತೊಡಗಿದನು. ಮುನಿಗಳನ್ನು ಬೈಯುತ್ತಾ ಅವನು ಭೂಮಿಯ ಮೇಲೆ ತಿರುಗಾಡಿದನು. ಆಗ ಅವನು ಮಹಾವೀರ ಮನೀಷಿಣೀ ಧನುಷಾಕ್ಷನನ್ನು ಭೇಟಿಯಾದನು. ಮೇಧಾವಿಯು ಅವನನ್ನು ಅಪಮಾನಿಸಲು ಆ ವೀರ್ಯವಂತನು ಭಸ್ಮವಾಗು ಎಂದು ಅವನಿಗೆ ಶಪಿಸಿದನು. ಆದರೂ ಅವನು ಭಸ್ಮವಾಗಲಿಲ್ಲ. ಶಾಪಕ್ಕೊಳಗಾಗದೇ ಇದ್ದ ಆ ಮೇಧಾವಿಯನ್ನು ಕಂಡು ಧನುಷಾಕ್ಷನು ಅವನ ನಿಮಿತ್ತ ಮಹಿಷವನ್ನು ಒಡೆದನು. ತನ್ನ ನಿಮಿತ್ತವು ನಾಶಗೊಳ್ಳಲು ಆ ಬಾಲಕನು ತಕ್ಷಣವೇ ಸತ್ತು ಬಿದ್ದನು. ಆಗ ಆ ಮೃತ ಮಗನನ್ನು ಹಿಡಿದು ತಂದೆಯು ವಿಲಪಿಸಿದನು. ಜೋರಾಗಿ ವಿಲಪಿಸುತ್ತಿದ್ದ ಅವನನ್ನು ನೋಡಿ ಮುನಿಗಳು ಪುನರಾವರ್ತಿಸಿದರು. ಅದನ್ನೇ ಹಿಂದೆ ವೇದಗಳಲ್ಲಿ ಹೇಳಿದೆ. ಅದನ್ನು ನಾನು ನಿನಗೆ ಹೇಳುತ್ತೇನೆ. ಮನುಷ್ಯನು ಎಂದೂ ವಿಧಿಯನ್ನು ಬದಲಿಸುವಷ್ಟು ಒಡೆಯನಾಗಲಾರ! ಮಹರ್ಷಿ ಧನುಷಾಕ್ಷನು ಪರ್ವತಗಳನ್ನೇ ತುಂಡರಿಸಿದನು. ಹೀಗೆ ಬಾಲಕರು ವರಗಳನ್ನು ಪಡೆದು ಸೊಕ್ಕಿನಿಂದ ತುಂಬಿ ಸಾಹಸಿಗಳಾಗುತ್ತಾರೆ ಮತ್ತು ಬೇಗನೇ ವಿನಾಶಹೊಂದುತ್ತಾರೆ. ಹೀಗೆ ನಿನಗೂ ಆಗಬಾರದು. ಈ ರೈಭ್ಯನೂ ಮತ್ತು ಹಾಗೆ ಅವನ ಮಕ್ಕಳಿಬ್ಬರೂ ವೀರ್ಯವಂತರು. ಮಗನೇ! ಅವನನ್ನು ಮೀರಿಸಲು ಪ್ರಯತ್ನಪಡದೇ ಇರು. ಯಾಕೆಂದರೆ ಆ ಮಹಾನೃಷಿಯು ಕೃದ್ಧನೂ, ರೋಷದಿಂದ ಪೀಡಿಸಲು ಸಮರ್ಥನೂ, ತಿಳಿದವನೂ, ತಪಸ್ವಿಯೂ ಮತ್ತು ಕ್ರೋಧನನೂ ಅಗಿದ್ದಾನೆ.”

ಯವಕ್ರಿಯು ಹೇಳಿದನು: “ತಂದೇ! ಹಾಗೆಯೇ ಮಾಡುತ್ತೇನೆ. ನನ್ನ ಮೇಲೆ ಎಂದೂ ಭಿರುಸಾಗಬೇಡ. ನಿನ್ನನ್ನು ಹೇಗೆ ನಾನು ಮನ್ನಿಸುತ್ತೇನೋ ಹಾಗೆ ರೈಭ್ಯನನ್ನೂ ಕೂಡ ನನ್ನ ತಂದೆಯಂತೆ ಗೌರವಿಸುತ್ತೇನೆ.”

ಈ ರೀತಿ ಯಾವುದಕ್ಕೂ ಭಯಪಡದ ಯವಕ್ರಿಯು ತನ್ನ ತಂದೆಗೆ ಮೆಚ್ಚುಗೆಯಾಗುವ ಈ ಮಾತುಗಳನ್ನಾಡಿ, ಇತರ ಋಷಿಗಳನ್ನು ಅವಹೇಳನೆ ಮಾಡುವುದರಲ್ಲಿ ಪರಮ ಸಂತೋಷವನ್ನು ಪಡೆದನು. ಹೀಗೆಯೇ ಅಲೆದಾಡುತ್ತಿರುವಾಗ ಯಾವುದಕ್ಕೂ ಹೆದರದ ಯವಕ್ರಿಯು ಮಾಧವ ಮಾಸದಲ್ಲಿ ರೈಭ್ಯನ ಆಶ್ರಮದ ಕಡೆ ನಡೆದನು. ಹೂತುಂಬಿದ ಮರಗಳಿಂದ ಅಲಂಕರಿಸಲ್ಪಟ್ಟ ಆ ಪುಣ್ಯ ಆಶ್ರಮದಲ್ಲಿ ಅವನು ಕಿನ್ನರಿಯಂತೆ ಓಡಾಡುತ್ತಿದ್ದ ಅವನ ಸೊಸೆಯನ್ನು ಕಂಡನು. ಆಗ ಕಾಮದಿಂದ ತನ್ನ ಮನಸ್ಸನ್ನೇ ಕಳೆದುಕೊಂಡ ಯವಕ್ರಿಯು ನಿರ್ಲಜ್ಜನಾಗಿ ಲಜ್ಜೆಗೊಂಡ ಅವಳಿಗೆ ನನ್ನೊಟ್ಟಿಗೆ ಮಲಗು ಎಂದು ಕೇಳಿದನು. ಅವನ ಗುಣವನ್ನು ಅರಿತ ಮತ್ತು ಅವನ ಶಾಪಕ್ಕೆ ಹೆದರಿದ ಮತ್ತು ರೈಭ್ಯನ ತೇಜಸ್ಸನ್ನು ತಿಳಿದಿದ್ದ ಅವಳು ಹಾಗೆಯೇ ಆಗಲಿ ಎಂದು ಹೋದಳು. ಆಗ ಅವನು ಏಕಾಂತಕ್ಕೆ ಕರೆದೊಯ್ದು ಬಲಾತ್ಕಾರದಿಂದ ಸಂಭೋಗಿಸಿದನು. ಅನಂತರ ಅರಿಂದಮ ರೈಭ್ಯನು ತನ್ನ ಆಶ್ರಮಕ್ಕೆ ಹಿಂದಿರುಗಿದನು. ಆರ್ತಳಾಗಿ ಅಳುತ್ತಿರುವ ಪರಾವಸುವಿನ ಹೆಂಡತಿ ಮತ್ತು ತನ್ನ ಸೊಸೆಯನ್ನು ನೋಡಿ ಅವನು ಮೃದುವಾದ ಮಾತುಗಳಿಂದ ಅವಳನ್ನು ಸಂತವಿಸಿ ಕೇಳಿದನು. ಆ ಶುಭೆಯು ಅವನಿಗೆ – ಯವಕ್ರಿಯು ಮಾತನಾಡಿದುದನ್ನು ಮತ್ತು ಸಾಕಷ್ಟು ವಿಚಾರಮಾಡಿ ತಾನು ಯವಕ್ರಿಗೆ ಕೊಟ್ಟ ಉತ್ತರ – ಎಲ್ಲವನ್ನೂ ವರದಿಮಾಡಿದಳು. ಯವಕ್ರಿಯ ವಿಚೇಷ್ಟೆಯನ್ನು ಕೇಳಿದ ರೈಭ್ಯನು ತನ್ನ ಚೇತಸ್ಸೇ ಸುಡುತ್ತಿರುವಂತಹ ಮಹಾ ಕೋಪಿಷ್ಟನಾದನು. ಆ ಭೃಷಕೋಪನ ತಪಸ್ವಿಯು ಕೋಪಾವಿಷ್ಟನಾಗಿ ತನ್ನ ತಲೆಯ ಒಂದು ಕೂದಲನ್ನು ಕಿತ್ತು ಸುಸಂಸ್ಕೃತವಾದ ಅಗ್ನಿಯಲ್ಲಿ ಆಹುತಿಯನ್ನಾಗಿತ್ತನು. ಆಗ ಅಲ್ಲಿಂದ ರೂಪದಲ್ಲಿ ತನ್ನ ಸೊಸೆಯಂತದೇ ರೂಪವನ್ನುಳ್ಳ ನಾರಿಯು ಮೇಲೆದ್ದಳು. ಆಗ ಅವನು ತನ್ನ ತಲೆಯಿಂದ ಪುನಃ ಇನ್ನೊಂದು ಕೂದಲನ್ನು ಕಿತ್ತು ಅಗ್ನಿಯಲ್ಲಿ ಹಾಕಲು ಅಲ್ಲಿಂದ ಭಯಂಕರನಾಗಿ ಕಾಣುತ್ತಿದ್ದ ಘೋರ ಕಣ್ಣುಗಳುಳ್ಳ ರಾಕ್ಷಸನು ಮೇಲೆ ಬಂದನು. ಅವರಿಬ್ಬರೂ ರೈಭ್ಯನಲ್ಲಿ ನಾವು ಯಾವ ಕಾರ್ಯವನ್ನು ಮಾಡಬೇಕು ಎಂದು ಕೇಳಿದರು.  ಅವರಿಗೆ ಕೃದ್ಧನಾದ ಋಷಿಯು “ಯವಕ್ರಿಯನ್ನು ಕೊಲ್ಲಿ!” ಎಂದು ಹೇಳಿದನು. “ಹಾಗೆಯೇ ಆಗಲಿ!” ಎಂದು ಅವರೀರ್ವರು ಯವಕ್ರಿಯನ್ನು ಕೊಲ್ಲಲು ಹೋದರು.

ಆ ಮಹಾತ್ಮನಿಂದ ಸೃಷ್ಟಿಗೊಂಡ ಅವಳು ಅವನನ್ನು ಸಮೀಪಿಸಿ, ಮೋಹಿಸಿ, ಅವನ ಕಮಂಡಲನ್ನು ಅಪಹರಿಸಿದಳು. ತನ್ನ ಕಮಂಡಲುವನ್ನು ಕಳೆದುಕೊಂಡ ಯವಕ್ರಿಯು ಮಲಿನನಾದಾಗ ಆ ರಾಕ್ಷಸನು ಮೇಲಿತ್ತಿದ ಶೂಲದಿಂದ ಅವನ ಮೇಲೆ ಧಾಳಿಮಾಡಿದನು. ಕೊಲ್ಲುವ ಆಸೆಯಿಂದ ಶೂಲವನ್ನು ಹಿಡಿದು ತನ್ನ ಮೇಲೆಗಿರುದುದನ್ನು ನೋಡಿದ ಯವಕ್ರಿಯು ತಕ್ಷಣವೇ ಎದ್ದು ಸರೋವರದ ಕಡೆಗೆ ಓಡಿದನು. ಸರೋವರದಲ್ಲಿ ನೀರಿಲ್ಲದಿರುವುದನ್ನು ಕಂಡು ಯವಕ್ರಿಯು ಪುನಃ ಅವಸರದಲ್ಲಿ ನದಿಯಕಡೆ ಹೋದನು. ಆದರೆ ಎಲ್ಲ ನದಿಗಳೂ ಬತ್ತಿಹೋಗಿದ್ದವು. ಶೂಲವನ್ನು ಹಿಡಿದ ಆ ಘೋರ ರಾಕ್ಷಸನು ಬೆನ್ನೆತ್ತಿ ಬರುತ್ತಿರಲು ಭಯಭೀತನಾಗಿ ಅವನು ತನ್ನ ತಂದೆಯ ಅಗ್ನಿಹೋತ್ರದ ಬಳಿ ಓಡಿ ಬಂದನು. ಆದರೆ ಅವನು ಪ್ರವೇಶಿಸುತ್ತಿರುವಾಗ ಕಾವಲುಗಾರನಾಗಿದ್ದ ಕುರುಡ ಶೂದ್ರನು ಅವನನ್ನು ಬಲವಂತವಾಗಿ ಬಾಗಿಲಲ್ಲಿಯೇ ತಡೆದನು. ಶೂದ್ರನು ಅವನನ್ನು ತಡೆಹಿಡಿದಿರಲು ಆ ರಾಕ್ಷಸನು ಯವಕ್ರಿಯನ್ನು ಶೂಲದಿಂದ ಹೊಡೆದನು ಮತ್ತು ಅವನು ಹೃದಯ ಸೀಳಿ ಕೆಳಗೆ ಬಿದ್ದನು. ಯವಕ್ರಿಯನ್ನು ಕೊಂದು ಆ ರಾಕ್ಷಸನಾದರೋ ರೈಭ್ಯನಲ್ಲಿಗೆ ಮರಳಿದನು. ರೈಭ್ಯನು ಅವನಿಗೆ ಹೋಗಲು ಅನುಮತಿಯನ್ನಿತ್ತನು. ಆದರೆ ಆ ನಾರಿಯೊಡನೆ ಇರತೊಡಗಿದನು.

ಭರದ್ವಾಜನಾದರೋ ಸ್ವಾಧ್ಯಾಯ ಆಹ್ನೀಕಗಳನ್ನು ಪೂರೈಸಿ ಸಮಿತ್ಯದ ಕಟ್ಟನ್ನು ಹೊತ್ತು ತನ್ನ ಆಶ್ರಮವನ್ನು ಪ್ರವೇಶಿಸಿದನು. ಇದಕ್ಕೂ ಹಿಂದೆ ಅವನನ್ನು ನೋಡಿದ ಕೂಡಲೇ ಎದ್ದು ನಿಲ್ಲುವ ಅಗ್ನಿಗಳೆಲ್ಲವೂ ಇಂದು ಅವನ ಮಗನು ಹತನಾದುದರಿಂದ ಅವನನ್ನು ಸ್ವಾಗತಿಸಲು ಎದ್ದು ನಿಲ್ಲಲಿಲ್ಲ. ಅಗ್ನಿಹೋತ್ರದಲ್ಲಿ ಈ ರೀತಿಯ ವ್ಯತ್ಯಾಸವನ್ನು ಗಮನಿಸಿದ ಆ ಮಹಾತಪಸ್ವಿಯು ಆ ಕುರುಡು ಶೂದ್ರ ಮನೆಕಾವಲಿನವನನ್ನು ಕೇಳಿದನು: “ಶೂದ್ರ! ನನ್ನನ್ನು ನೋಡಿ ಈ ಅಗ್ನಿಗಳು ಏಕೆ ಸ್ವಾಗತಿಸುತ್ತಿಲ್ಲ? ನೀನೂ ಕೂಡ ಹಿಂದಿನಂತಿಲ್ಲ. ಆಶ್ರಮದಲ್ಲಿ ಎಲ್ಲವೂ ಕ್ಷೇಮ ತಾನೇ? ಅಲ್ಪಬುದ್ಧಿಯ ನನ್ನ ಆ ಮಗನು ರೈಭ್ಯನಲ್ಲಿಗೆ ಹೋಗಲಿಲ್ಲ ತಾನೇ? ನನಗೆ ಬೇಗನೆ ಹೇಳು. ನನ್ನ ಮನಸ್ಸು ಸುಖದಿಂದಿಲ್ಲ!”

ಶೂದ್ರನು ಹೇಳಿದನು: “ನಿನ್ನ ಮಂದಚೇತಸ ಮಗನು ರೈಭ್ಯನಲ್ಲಿಗೆ ಹೋದ. ಆದುದರಿಂದಲೇ ಅವನು ಬಲವಂತನಾದ ರಾಕ್ಷಸನಿಂದ ಕೊಲ್ಲಲ್ಪಟ್ಟು ಬಿದ್ದಿದ್ದಾನೆ. ಶೂಲವನ್ನು ಹಿಡಿದ ರಾಕ್ಷಸನು ಅವನನ್ನು ಅಗ್ನ್ಯಾಗಾರದ ವರೆಗೆ ಬೆನ್ನಟ್ಟಿ ಬಂದ ಮತ್ತು ನಾನು ನಿನ್ನ ಮಗನನ್ನು ನನ್ನ ತೋಳುಗಳಿಂದ ಬಾಗಿಲಲ್ಲಿಯೇ ತಡೆದೆ. ತುಂಬಾ ಅಶುಚಿಯಾಗಿದ್ದು ನೀರನ್ನು ಹುಡುಕುತ್ತಿದ್ದ ಅವನನ್ನು ಆಗ ಜೋರಾಗಿ ಓಡಿಬಂದ ಆ ರಾಕ್ಷಸನು ಹಿಡಿದಿದ್ದ ಶೂಲದಿಂದ ಅವನನ್ನು ಮುಗಿಸಿದನು.”

ಶೂದ್ರನ ಆ ವಿಪ್ರಿಯ ಮಾತುಗಳನ್ನು ಕೇಳಿದ ಭರದ್ವಾಜನು ತೀರಿಹೋಗಿದ್ದ ಮಗನನ್ನು ಹಿಡಿದೆತ್ತಿ ಬಹಳ ದುಃಖಿತನಾಗಿ ರೋದಿಸಿದನು: “ದ್ವಿಜರಿಗೆ ಅಧ್ಯಯನ ಮಾಡದೇ ವೇದಗಳು ಪ್ರಕಟವಾಗಲಿ ಎಂದು ಬ್ರಾಹ್ಮಣರಿಗೋಸ್ಕರವಾಗಿ ನೀನು ತಪಸ್ಸನ್ನು ತಪಿಸಲಿಲ್ಲವೇ? ಹಾಗೆ ನೀನು ಮಹಾತ್ಮ ಬ್ರಾಹ್ಮಣರ ಕಲ್ಯಾಣಕ್ಕಾಗಿಯೇ ನಡೆದುಕೊಂಡೆ. ಸರ್ವ ಭೂತಗಳಿಗೂ ನೀನು ತಪ್ಪಿತಸ್ಥನೆಂದಿರಲಿಲ್ಲ. ಹಾಗಿದ್ದರೂ ಕರ್ಕಶತ್ವವನ್ನು ನಿನ್ನದಾಗಿಸಿಕೊಂಡೆ. ಮಗನೇ! ರೈಭ್ಯನ ಮನೆಯ ಬಳಿ ಸುಳಿಯಬೇಡೆಂದು ನಾನು ನಿಷಿದ್ದ ಮಾಡಿದ್ದೆ. ಆದರೂ ನೀನು ಕಾಲಾಂತಕ ಯಮನಂತಿರುವ ಆ ಕ್ಷುದ್ರನಲ್ಲಿಗೆ ಹೋದೆ. ಆ ಮಹಾತೇಜಸ್ವಿ ಪರಮದುರ್ಮತಿಯು ವೃದ್ಧನಾದ ನನಗೆ ನೀನೊಬ್ಬನೇ ಮಗನೆಂದು ತಿಳಿದಿದ್ದರೂ ಕೋಪಕ್ಕೆ ವಶನಾದನು. ರೈಭ್ಯನ ಕೆಲಸದಿಂದಾಗಿ ಈ ಪುತ್ರಶೋಕವು ನನಗೆ ಪ್ರಾಪ್ತವಾಯಿತು. ಪುತ್ರನು ಮೃತನಾದನೆಂದು ನಾನು ಈ ಭೂಮಿಯಲ್ಲಿಯೇ ಬಹಳ ಇಷ್ಟವಾದ ಈ ಪ್ರಾಣವನ್ನೇ ತೊರೆಯುತ್ತೇನೆ. ಹೇಗೆ ನಾನು ಪುತ್ರಶೋಕದಿಂದ ದುಃಖಿತನಾಗಿ ಈ ದೇಹವನ್ನು ತೊರೆಯುತ್ತೇನೋ ಹಾಗೆ ರೈಭ್ಯನು ತನ್ನ ಹಿರಿಯ ಮಗನ ಹಿಂಸೆಯಿಂದಾಗಿ ಶೀಘ್ರದಲ್ಲಿಯೇ ಸಾವನ್ನು ಹೊಂದುತ್ತಾನೆ. ಮಕ್ಕಳೇ ಹುಟ್ಟಿಲ್ಲದ ಜನರು ಸುಖಿಗಳು. ಅಂಥವರು ಪುತ್ರಶೋಕವನ್ನು ಹೊಂದದೇ ಯಥಾಸುಖವಾಗಿ ಹೋಗುತ್ತಿರುತ್ತಾರೆ. ಈ ರೀತಿ ಪುತ್ರನ ಸಾವಿನ ಶೋಕದಿಂದ ತುಂಬಾ ವ್ಯಾಕುಲ ಮನಸ್ಕನಾಗಿ ಯಾರು ತಾನೆ ಪಾಪತರನಾಗಿರುವ ತನ್ನ ಮಿತ್ರಗೆ ಶಪಿಸುತ್ತಾನೆ? ಸತ್ತಿರುವ ಮಗನನ್ನು ಕಂಡೆನು ಮತ್ತು ನನ್ನ ಶ್ರೇಷ್ಠ ಸಖನನ್ನು ಶಪಿಸಿದೆನು. ಈ ರೀತಿಯ ಆಪತ್ತು ಇನ್ನು ಯಾರಿಗೆ ತಾನೇ ಬರುತ್ತದೆ?”

ಹೀಗೆ ಬಹುವಿಧದಲ್ಲಿ ವಿಲಪಿಸಿ ಭರದ್ವಾಜನು ತನ್ನ ಮಗನನ್ನು ಸುಟ್ಟನು ಮತ್ತು ನಂತರ ಚೆನ್ನಾಗಿ ಉರಿಯುತ್ತಿರುವ ಬೆಂಕಿಯನ್ನು ಪ್ರವೇಶಿಸಿದನು.

ಇದೇ ಸಮಯದಲ್ಲಿ ಮಹಾಭಾಗ ರೈಭ್ಯನ ಯಜಮಾನ ಪ್ರತಾಪವಾನ್ ರಾಜಾ ಬೃಹದ್ದ್ಯುಮ್ನನು ಸತ್ರವನ್ನು ಕೈಗೊಂಡನು. ಧೀಮಂತ ಬೃಹದ್ದ್ಯುಮ್ನನು ರೈಭ್ಯನ ಮಕ್ಕಳಾದ ಅರಾವಸು ಮತ್ತು ಪರಾವಸುಗಳಿಬ್ಬರನ್ನೂ ಒಟ್ಟಿಗೇ ಸತ್ರದಲ್ಲಿ ವೃತ್ತರನ್ನಾಗಿ ತೆಗೆದುಕೊಂಡಿದ್ದನು. ತಂದೆಯ ಅನುಮತಿಯನ್ನು ಪಡೆದು ಅವರಿಬ್ಬರೂ ಅಲ್ಲಿಗೆ ಹೋದರು. ಆಶ್ರಮದಲ್ಲಿ ರೈಭ್ಯನು ಪರಾವಸುವಿನ ಪತ್ನಿಯೊಡನಿದ್ದನು. ಅನಂತರ ಪರಾವಸುವು ಭೇಟಿಯಾಗಲು ಒಬ್ಬನೇ ತನ್ನ ಮನೆಗೆ ಬರುವಾಗ ವನದಲ್ಲಿ ಕಪ್ಪು ಜಿನವನ್ನು ಮುಚ್ಚಿಕೊಂಡಿದ್ದ ತನ್ನ ತಂದೆಯನ್ನು ಕಂಡನು. ಆಗ ಬಹಳ ರಾತ್ರಿಯಾಗಿತ್ತು. ರಾತ್ರಿ ಸ್ವಲ್ಪವೇ ಉಳಿದಿತ್ತು. ನಿದ್ದೆಗೆಟ್ಟು ಪ್ರಯಾಣಿಸುತ್ತಿದ್ದ ಅವನು ಗಹನವಾದ ಅರಣ್ಯದಲ್ಲಿ ತನ್ನ ತಂದೆಯನ್ನು ಜಿಂಕೆಯೆಂದು ಅಂದುಕೊಂಡನು. ಜಿಂಕೆಯೆಂದು ತಿಳಿದು ಅವನು ತನ್ನ ತಂದೆಯನ್ನು, ಹಾಗೆ ಮಾಡಬೇಕೆಂದು ಬಯಸಿರಲಿಲ್ಲದಿದ್ದರೂ ತನ್ನ ದೇಹವನ್ನು ಉಳಿಸಿಕೊಳ್ಳಲು, ಕೊಂದನು. ಅವನು ಅವನ ಪ್ರೇತಕಾರ್ಯಗಳೆಲ್ಲವನ್ನೂ ಮಾಡಿ ಪುನಃ ಸತ್ರಕ್ಕೆ ಹಿಂದಿರುಗಿ ತನ್ನ ತಮ್ಮನಿಗೆ ಹೇಳಿದನು: “ಈ ಕರ್ಮವನ್ನು ನೀನೊಬ್ಬನೇ ಪೂರೈಸಲು ಎಂದೂ ಶಕ್ತನಲ್ಲ. ನಾನಾದರೋ ಜಿಂಕೆಯೆಂದು ತಿಳಿದು ತಂದೆಯನ್ನು ಕೊಂದೆ. ಆದುದರಿಂದ ಬ್ರಹ್ಮಹತ್ಯಾದೋಷದ ವ್ರತವನ್ನು ನೀನು ನಡೆಸಿದರೆ ಒಳ್ಳೆಯದು. ನಾನೊಬ್ಬನೇ ಈ ಕಾರ್ಯವನ್ನು ಮುಗಿಸಲು ಸಮರ್ಥನಾಗಿದ್ದೇನೆ.”

ಅರಾವಸುವು ಹೇಳಿದನು: “ಹಾಗಾದರೆ ನೀನೇ ಈ ಧೀಮಂತ ಬೃದದ್ದ್ಯುಮ್ನನ ಸತ್ರವನ್ನು ಪೂರೈಸು. ನಾನು ನಿನ್ನ ಪರವಾಗಿ ನಿಯತೇಂದ್ರಿಯನಾಗಿದ್ದು ಬ್ರಹ್ಮಹತ್ಯೆಯ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುತ್ತೇನೆ.”

ಅವನ ಬ್ರಹ್ಮಹತ್ಯೆಯ ವ್ರತವನ್ನು ಪೂರೈಸಿ ಮುನಿ ಅರಾವಸುವು ಪುನಃ ಸತ್ರಕ್ಕೆ ಹೋದನು. ತನ್ನ ತಮ್ಮನನ್ನು ನೋಡಿದ ಪರಾವಸುವು ಅಲ್ಲಿಯೇ ಪರಿಷತ್ತಿನಲ್ಲಿ ಕುಳಿತಿದ್ದ ಬೃಹದ್ದ್ಯುಮ್ನನಿಗೆ ಈ ಮಾತುಗಳನ್ನಾಡಿದನು: “ಈ ಬ್ರಹ್ಮ ಹಂತಕನಿಗೆ ನಿನ್ನ ಯಜ್ಞವನ್ನು ನೋಡಲು ಒಳಗೆ ಬಿಡಬೇಡ! ಬ್ರಹ್ಮಹತ್ಯಾದೋಷಿಯು ಒಂದು ಕಡೆಗಣ್ಣಿನ ನೋಟದಿಂದಲೇ ನಿನ್ನನ್ನು ಪೀಡಿಸಬಲ್ಲ ಎನ್ನುವುದರಲ್ಲಿ ಸಂಶಯವಿಲ್ಲ.”

ಆಗ ಅರಾವಸುವು ಈ ಬ್ರಹ್ಮಹತ್ಯೆಯನ್ನು ಮಾಡಿದ್ದುದು ನಾನಲ್ಲ ಎಂದು ಪುನಃ ಪುನಃ ಕೂಗಿ ಹೇಳುತ್ತಿದ್ದರೂ ಅವನನ್ನು ರಾಜನ ಸೇವಕರು ಎಳೆದು ಹೊರಹಾಕಿದರು. ಅವನು ಬ್ರಹ್ಮಹತ್ಯಾಪ್ರಾಯಶ್ಚಿತ್ತವನ್ನು ತನಗಾಗಿ ಮಾಡಿಲ್ಲವೆಂದೂ ಬ್ರಹ್ಮಹತ್ಯೆಯನ್ನು ಸ್ವಯಂ ಅವನು ಮಾಡಿಲ್ಲವೆಂದು ಹೇಳಿದರೂ ಯಾರೂ ಅದನ್ನು ಸ್ವೀಕರಿಸಲಿಲ್ಲ. ಅರಾವಸುವು ಮಾಡಿದುದರಿಂದ ದೇವತೆಗಳು ಸಂಪ್ರೀತರಾದರು. ಅವರು ಅರಾವಸುವನ್ನು ಮುಖ್ಯ ಪುರೋಹಿತನನ್ನಾಗಿ ನಿಯೋಜಿಸಿ ಪರಾವಸುವನ್ನು ಹೊರಹಾಕಿದರು. ಆಗ ಅಗ್ನಿಯ ಮುಖಂಡತ್ವದಲ್ಲಿ ದೇವತೆಗಳು ಅವನಿಗೆ ವರಗಳನ್ನಿತ್ತರು. ಅವನಾದರೂ ತನ್ನ ತಂದೆಯು ಮೇಲೇಳುವಂತೆ ವರವನ್ನು ಕೇಳಿಕೊಂಡನು. ಹಾಗೆಯೇ ತನ್ನ ಅಣ್ಣನು ತಂದೆಯನ್ನು ವಧಿಸಿದುದನ್ನು ಮರೆತು ತಪ್ಪಿಲ್ಲದಂತಾಗುವಂತೆ ಮತ್ತು ಭರದ್ವಾಜ ಯವಕ್ರಿ ಇಬ್ಬರೂ ಮೇಲೇಳುವಂತೆ ಕೇಳಿಕೊಂಡನು. ಆಗ ಎಲ್ಲರೂ ಎದ್ದು ಕಾಣಿಸಿಕೊಂಡರು. ಯವಕ್ರಿಯು ಅಗ್ನಿಯನ್ನು ಮುಂದಿಟ್ಟುಕೊಂಡಿದ್ದ ದೇವತೆಗಳಿಗೆ ಹೇಳಿದನು: “ಅಮರೋತ್ತಮರೇ! ನಾನು ಬ್ರಹ್ಮನನ್ನು ಕಲಿತಿದ್ದೆ ಮತ್ತು ವ್ರತಗಳನ್ನು ಆಚರಿಸಿದ್ದೆ. ಹಾಗಿದ್ದರೂ ಕಲಿತಿದ್ದ ತಪಸ್ವಿ ರೈಭ್ಯನು ತನ್ನ ಆ ವಿಧಿಯಿಂದ ನನ್ನನ್ನು ಕೆಳಗುರುಳಿಸಲು ಹೇಗೆ ಶಕ್ತನಾದ?”

ದೇವತೆಗಳು ಹೇಳಿದರು: “ಮುನಿ ಯವಕ್ರಿ! ನೀನು ಹೇಗೆ ಮಾತನ್ನಾಡುತ್ತೀಯೋ ಹಾಗೆ ಮಾಡಬೇಡ. ನೀನು ಹಿಂದೆ ಗುರುವಿಲ್ಲದೇ ವೇದಗಳನ್ನು ಸುಲಭ ಮಾರ್ಗದಲ್ಲಿ ಕಲಿತೆ. ಆದರೆ ರೈಭ್ಯನು ಗುರುವನ್ನು ತನ್ನ ಕೆಲಸಗಳಿಂದ ತೃಪ್ತಿಪಡಿಸಿ ಕಷ್ಟದಲ್ಲಿ ಬಹಳ ದೀರ್ಘ ಕಾಲದಲ್ಲಿ ಅನುತ್ತಮ ಬ್ರಹ್ಮನನ್ನು ಕಲಿತುಕೊಂಡನು.”

ಹೀಗೆ ಅಗ್ನಿಯನ್ನು ಮುಂದಿಟ್ಟುಕೊಂಡು ಬಂದಿದ್ದ ದೇವತೆಗಳು ಯವಕ್ರಿಗೆ ಹೇಳಿ ಅವರೆಲ್ಲರನ್ನೂ ಜೀವಂತಗೊಳಿಸಿ ಪುನಃ ದೇವಲೋಕಕ್ಕೆ ತೆರಳಿದರು.