ಮನೆ ರಾಜ್ಯ ರಾಯಚೂರು: ಬಿಸಿಲಿನ ಝಳಕ್ಕೆ  24 ಗಂಟೆಗಳ ಅವಧಿಯಲ್ಲಿ ಐವರು ಮೃತ

ರಾಯಚೂರು: ಬಿಸಿಲಿನ ಝಳಕ್ಕೆ  24 ಗಂಟೆಗಳ ಅವಧಿಯಲ್ಲಿ ಐವರು ಮೃತ

0

ರಾಯಚೂರು: ಜಿಲ್ಲೆಯಲ್ಲಿ ಭಾರಿ ಬಿಸಿಲು ಆವರಿಸಿಕೊಂಡಿದ್ದು, ಬಿಸಿಲಿನ ಝಳಕ್ಕೆ ಕಳೆದ 24 ಗಂಟೆಗಳ ಅವಧಿಯಲ್ಲಿ ಐವರು ಮೃತಪಟ್ಟಿದ್ದಾರೆ. ಶಕ್ತಿನಗರದಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡು ಉರಿದಿದೆ.

Join Our Whatsapp Group

ಸಿಂಧನೂರು ತಾಲ್ಲೂಕಿನ ಮುಕ್ಕುಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಡಾ ಗ್ರಾಮದಲ್ಲಿ ಗರಿಷ್ಠ ಉಷ್ಠಾಂಶ 45 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದು, ಪ್ರಖರ ಬಿಸಿಲು ಹಾಗೂ ನಿರ್ಜಲೀಕರಣದಿಂದ ನಾಲ್ವರು ಮೃಟ್ಟಿದ್ದಾರೆ.

ವೀರೇಶ ಹನುಮಂತಪ್ಪ ಮಡಿವಾಳ(50) ಹಳ್ಳಕ್ಕೆ ಬಟ್ಟೆ ತೊಳೆಯಲು ಹೋದಾಗ ಸಂಜೆ ಅಲ್ಲಿಯೇ ಬಿದ್ದು ಮೃತಪಟ್ಟರೆ,  ಗಂಗಮ್ಮ ದೇವದಾಸಿ(60) ಹಾಗೂ  ಅಂಗವಿಕಲ ಪ್ರದೀಪ  ತಿಮ್ಮಣ್ಣ ಪೂಜಾರಿ (15) ಹಾಸಿಗೆಯಲ್ಲೇ ನಿಧನರಾಗಿದ್ದಾರೆ. ದುರ್ಗಮ್ಮ  ಹನುಮಂತಪ್ಪ ಉಪ್ಪಾರ್ (60) ತುಮಕೂರಲ್ಲಿ ಕೊನೆಯುಸಿರೆಳೆದಿದ್ದಾರೆ.

ರಾಯಚೂರು ತಾಲ್ಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ದೇವಸ್ಥಾನಕ್ಕೆ ಹೋಗಿ ಮನೆಗೆ ಬರುತ್ತಿದ್ದ ಹನುಮಂತ (45) ಮೃತಪಟ್ಟಿದ್ದಾರೆ. ಬೆಳಿಗ್ಗೆ ಹೊಲದಿಂದ ಬರುವಾಗ  ದಾರಿಯಲ್ಲೇ ಇದ್ದ ಮಂದಿರದಲ್ಲಿ ಕೈ ಮುಗಿದು ಮನೆಗೆ ಬಂದು ಅತಿಯಾದ ಬಾಯಾರಿಕೆಯಿಂದ ನೀರು ಕೇಳಿದ್ದಾರೆ. ನೀರು ಕುಡಿಯುವಷ್ಟರಲ್ಲಿ ಕುಸಿದು ಬಿದ್ದಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಸಿಂಧನೂರು ಹಾಗೂ ರಾಯಚೂರು ತಾಲ್ಲೂಕಿನಲ್ಲಿ ಪ್ರಖರ ಬಿಸಿಲೊಂದೇ ಅಲ್ಲ, ಕೆಲವರು ಅನಾರೋಗ್ಯದಿಂದಲೂ ಮೃತಪಟ್ಟಿರುವ  ಮಾಹಿತಿ ಇದೆ. ಮೂವರು ನಿರ್ಜಲೀಕರಣದಿಂದ ಮೃತಪಟ್ಟಿರುವ ಸಾಧ್ಯತೆ ಇದೆ. ವೈದ್ಯಕೀಯ ತಂಡ ಪರಿಶೀಲನೆ ನಡೆಸುತ್ತಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುರೇಶ ಬಾಬು ತಿಳಿಸಿದ್ದಾರೆ.

ರಾಯಚೂರು ತಾಲ್ಲೂಕಿನ ಶಕ್ತಿನಗರದ ವೈಟಿಪಿಎಸ್‌ ಮುಂಭಾಗ ರಾಯಚೂರು–ಹೈದರಾಬಾದ್ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಚಾಲಕ ರಸ್ತೆ ಬದಿಗೆ ಕಾರು ನಿಲ್ಲಿಸಿ ಹೊರಗೆ ಬಂದಿದ್ದಾರೆ. ಕಾರು ಹೊತ್ತಿ ಉರಿದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.

ಜಿಲ್ಲೆಯಲ್ಲಿ ಒಂದು ವಾರ ಪ್ರಖರ ಬಿಸಿಲು ಇದೆ. ಮೇ 4ರಂದು 45 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದ್ದು. ಮೇ 8ರ ವರೆಗೂ ಬಿಸಿಲಿನ ತಾಪ ಹಾಗೂ ಬಿಸಿಗಾಳಿ  ಮುಂದುವರಿಯಲಿದೆ. ರೈತರು ಹೊಲಗಳಿಗೆ ತೆರಳಬಾರದು. ಸಾರ್ವಜನಿಕರು ಮಧ್ಯಾಹ್ನ ಮನೆಯಲ್ಲೇ ಇರಬೇಕು. ಬಿಸಿಲಲ್ಲಿ ತಿರುಗಾಡಬಾರದು ಎಂದು ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಹವಾಮಾನ ಘಟಕದ ಶಾಂತಪ್ಪ ದುತ್ತರಗಾಂವಿ ತಿಳಿಸಿದ್ದಾರೆ.

ಹಿಂದಿನ ಲೇಖನಕುಟುಂಬದ ಒಳಗಿನ ಜಗಳದಿಂದಾಗಿಯೇ ಪ್ರಜ್ವಲ್‌ ರೇವಣ್ಣ ಪ್ರಕರಣ ಹೊರಬಂದಿದೆ: ಡಿ.ಕೆ. ಶಿವಕುಮಾರ್‌
ಮುಂದಿನ ಲೇಖನಹೊಸ ಕ್ರಿಮಿನಲ್ ಕಾನೂನಿನಲ್ಲಿ ಐಪಿಸಿ ಸೆಕ್ಷನ್ 498 ಎ ಯಥಾವತ್ ನಕಲು: ಬದಲಿಸುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ