ಮನೆ ಸುದ್ದಿ ಜಾಲ ಮೈಸೂರು: ಧಾರಾಕಾರ ಮಳೆ, ಹಲವೆಡೆ ಹಾನಿ, ಬೆಳೆ ಜಲಾವೃತ, ಸೇತುವೆ ಮುಳುಗಡೆ

ಮೈಸೂರು: ಧಾರಾಕಾರ ಮಳೆ, ಹಲವೆಡೆ ಹಾನಿ, ಬೆಳೆ ಜಲಾವೃತ, ಸೇತುವೆ ಮುಳುಗಡೆ

0

ಮೈಸೂರು(Mysuru): ಜಿಲ್ಲೆ ಹಾಗೂ ನಗರದಾದ್ಯಂತ ಧಾರಾಕಾರ ಮಳೆ ಮುಂದುವರಿದಿದ್ದು, ಬೆಳೆಗಳು ನಾಶವಾಗಿ, ಜಲಾವೃತಗೊಂಡಿವೆ. ಹಲವೆಡೆ ಸೇತುವೆ ಮುಳುಗಡೆಯಾಗಿದ್ದು, ಕೆಲವೆಡೆ ಕುಸಿದಿವೆ.

ಗ್ರಾಮಾಂತರ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಿಗ್ಗೆ ಜೋರು ಮಳೆಯಾಗಿದೆ.  ಎಚ್.ಡಿ.ಕೋಟೆ ಪಟ್ಟಣ ಸಮೀಪದ ಹೆಬ್ಬಳ್ಳ ಜಲಾಶಯ ತುಂಬಿದ್ದು, ಬೆಳಗನಹಳ್ಳಿಯಿಂದ ಎಚ್.ಡಿ.ಕೋಟೆಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆ ಆಗಿದೆ.

ಈ ಜಲಾಶಯಕ್ಕೆ ಹುಣಸೂರಿನ ಹನಗೂಡು ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಟೈಗರ್ ಬ್ಲಾಕ್ ಸಮೀಪದ ಸೇತುವೆಯ ಕೆಲ ಭಾಗ ಕುಸಿದಿದೆ.

ಕೃತಿಕ ಮಳೆಯ ಅಬ್ಬರದಿಂದ ಎಚ್‌.ಡಿ.ಕೋಟೆ ತಾಲ್ಲೂಕಿನ ಹಂಪಾಪುರದ ಗದ್ದಿಗೆಯಿಂದ ಅಣ್ಣೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಮುಳುಗಡೆಯಾಗಿದೆ. ಈ ರಸ್ತೆಯಲ್ಲಿ ಸಾಗಲು ವಾಹನ ಸವಾರರು ಹಾಗೂ ಜನರ ಹರಸಾಹಸಪಡುತ್ತಿದ್ದದ್ದು ಕಂಡುಬಂತು.

ಹುಣಸೂರು ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಮಂಜುನಾಥ ಬಡಾವಣೆಯ 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ನಗರಸಭೆ ಸಿಬ್ಬಂದಿ ಹಾಗೂ ಅಗ್ನಿಶಾಮಕದಳದವರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ತಾಲ್ಲೂಕಿನ ಹನಗೋಡು ಹೋಬಳಿಯ ಹಲವು ಗ್ರಾಮಗಳಲ್ಲಿ ಮಳೆಯಿಂದಾಗಿ ಬೆಳೆಗಳು ಜಲಾವೃತಗೊಂಡಿವೆ.

ಮೈಸೂರು ತಾಲ್ಲೂಕಿನ ವರುಣಾ ಭಾಗದಲ್ಲಿ ಮನೆಗಳಿಗೆ ಬಾಗಶಃ ಹಾನಿಯಾಗಿದ್ದು, ಕೃಷಿ ಜಮೀನಿಗೆ ನೀರು ನುಗ್ಗಿದೆ. ಪಿರಿಯಾಪಟ್ಟಣ, ತಿ.ನರಸೀಪುರದಲ್ಲೂ ಮಳೆಯಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ಎಂಟೂವರೆ ಎಕರೆ ಜಮೀನಿದ್ದು, ಮಳೆಯಿಂದ ಬಾಳೆ ಬೆಳೆ ನಾಶವಾಗಿದೆ. ಎರಡು ಪಂಪ್‌ ಸೆಟ್‌, 60 ಪೈಪ್‌, 10 ಜೆಟ್‌ ಜಲಾವೃತಗೊಂಡಿವೆ. ಯಾವುದೇ ಅಧಿಕಾರ ಬಂದು ನೋಡಿಲ್ಲ, ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಸರ್ಕಾರ ಏನಾದರೂ ಪರಿಹಾರ ನೀಡಬೇಕು ಎಂದು ಎಚ್‌.ಡಿ.ಕೋಟೆ ತಾಲ್ಲೂಕಿನ ನಂಜನಾಯಕನಹಳ್ಳಿ ಗ್ರಾಮದ ರೈತರು ಆಗ್ರಹಿಸಿದರು.

ಮೈಸೂರು ನಗರದಲ್ಲಿ ಬೆಳಿಗ್ಗೆ ಎಂಟು ಗಂಟೆವರೆಗೆ ಮಳೆ ಸುರಿಯಿತು. ಮೋಡದ ವಾತಾವರಣವಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ ಕೆ.ಆರ್‌.ನಗರ ತಾಲ್ಲೂಕಿನ ಗಂಧನಹಳ್ಳಿಯಲ್ಲಿ 23 ಸೆ.ಮೀ ಆಗಿದೆ‌ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ಹಿಂದಿನ ಲೇಖನನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ‌ ಶವ ಪತ್ತೆ: ಕೊಲೆ ಆರೋಪ
ಮುಂದಿನ ಲೇಖನಪ್ರತಿ ಮಿಲಿಸೆಕೆಂಡ್‌ನ ಅನಗತ್ಯ ಬಂಧನ ಆರೋಪಿಯ ಹಕ್ಕುಗಳಿಗೆ ಅಡ್ಡಿಯಾಗುತ್ತದೆ: ಯುಎಪಿಎ ಆರೋಪಿಗೆ ಮಧ್ಯಂತರ ಜಾಮೀನು ನೀಡಿದ ದೆಹಲಿ ನ್ಯಾಯಾಲಯ